ಚಿನ್ನದ ತೊಟ್ಟಿಲು -ಆರಗೋಡು ಸುರೇಶ ಶೆಣೈ ಅವರು ರಚಿಸಿದ ಮಕ್ಕಳ ಕವನಗಳು. ಸುಮಾರು 10 ರಿಂದ 18 ವರ್ಷದ ಮಕ್ಕಳನ್ನು ದೃಷ್ಟಿಯಲಿಟ್ಟುಕೊಂಡು ಬರೆಯಲಾದ ಒಟ್ಟು 74 ಕವನಗಳಿವೆ. ನಮ್ಮ ಸುತ್ತಲಿನ ಪ್ರಾಣಿ, ಪಕ್ಷಿ, ಪರಿಸರ, ದುಡಿಮೆಯ ಮಹತ್ವ, ಶ್ರಮದ ಫಲ, ರೈಲು, ಪುಸ್ತಕ, ತಾಯಿ ಭಾಷೆ ಕನ್ನಡ, ಹುಬ್ಬಳ್ಳಿ-ಧಾರವಾಡ, ನಾವು ಧರಿಸುವ ವಸ್ತಗಳು ಇತ್ಯಾದಿ ಹತ್ತು ಹಲವು ವಿಷಯಗಳ ಬಗ್ಗೆ ಪರಿಚಯಾತ್ಮಕವಾಗಿ ಬರೆದ ಬೋಧಪ್ರದವಾದ ಕವನಗಳನ್ನು ಇಲ್ಲಿ ಕಾಣಬಹುದು.
ಕಾರವಾರದ ಚುಟುಕು ಕವಿ ಶ್ರೀ ಜಿ.ಡಿ. ಪಾಲೇಕರ ಅವರು ಬರೆದ `ಮುನ್ನುಡಿಯ ಪುಟಗಳಿಂದ ಆಯ್ದದ್ದು
...... ಈ ಕೃತಿಯಲ್ಲಿ ಒಟ್ಟು ಸುಮಾರು ೬೦ಕ್ಕಿಂತ ಅಧಿಕ ಮಕ್ಕಳ ಪದ್ಯಗಳಿವೆ. ಗಣಪಗೆಮ್ಮ ನಮನವು ಕವನದ ಮೂಲಕ ಇಲ್ಲಿನ ಗೀತೆಗಳು ಮಾತನಾಡ ತೊಡಗುತ್ತವೆ. ಮುಂದಿನ ಗೀತೆ ``ವಸಂತವು ವಸ್ತ್ರ ಉಡಿಸಿ.. ಯಲ್ಲಿ ವಸಂತನ ಆಗಮನದಿಂದ ಚರಾಚರ ಸೃಷ್ಟಿಯಲ್ಲಿ ಜರುಗುತ್ತಿರುವ ಚೇತನದಾಯಕ ಸ್ಥಿತ್ಯಂತರಗಳನ್ನು ಹಾಗೆಯೇ ಮಳೆಗಾಲದ ಜಲಧಾರೆಯಿಂದ ಸಕಲ ಜೀವ ಜಗತ್ತಿಗೆ, ಬೆಳೆಗಳಿಗೆ ಆಗುವ ಪ್ರಯೋಜನಗಳನ್ನು, ನಿಸರ್ಗದಲ್ಲಿ ಜರುಗುವ ಬದಲಾವಣೆಗಳ ಕುರಿತು ಲೇಖಕರು ಇಲ್ಲಿ ಚೆನ್ನಾಗಿ ಬಿಂಬಿಸಿದ್ದಾರೆ. ಹಾಗೆಯೇ ಪಕ್ಷಿಯೊಂದು ತನ್ನ ದಿನನಿತ್ಯದ ಆಹಾರಕ್ಕಾಗಿ ಮಾಡುವ ಪಡಿಪಾಟೀಲನ್ನು `ಹಕ್ಕಿ ಹಾರಿತು ಪಕ್ಕ ಬಡಿಯಿತು ಗೀತೆಯಲ್ಲಿ ಬಿಚ್ಚಿಟ್ಟಿದ್ದಾರೆ. ಅಪ್ಪನ ಜೇಬು ಅಮ್ಮನ ತುರುಬು, ಗುಂಡ ಎದ್ದು ಬಂದ, ಗುಂಡನ ಹೊಟ್ಟೆ, ಫೋಟೊ ತೆಗೆಯಲು ಬಂದ್ರು, ಅಮ್ಮ ಅವ್ವ ತಾಯಿ, ಬೆಕ್ಕು, ಮಂಗಣ್ಣ, ಬೀದಿನಾಯಿ, ನಮ್ಮ ಸಿದ್ಧ ಇವೆಲ್ಲ ವಿಷಯಗಳನ್ನು ಹಾಸ್ಯಮಯವಾಗಿ ಪ್ರಕಟಿಸುವ ಪ್ರಯತ್ನಗಳಾದರೆ ನೀರು ಹಾಗೂ ಬ್ಯಾಕ್ಟೀರಿಯಾದಂತಹ ವೈಜ್ಞಾನಿಕ ವಿಷಯಗಳನ್ನು ಕಾವ್ಯ ರೂಪದಲ್ಲಿ ತಿಳಿಸುವ ಶೆಣೈ ಅವರ ಪ್ರಯತ್ನ ನಿಜಕ್ಕೂ ಸ್ವಾಗತಾರ್ಹ.
ಸಂಕಲನದ ಶೀರ್ಷಿಕೆ ಕವನ ``ಚಿನ್ನದ ತೊಟ್ಟಿಲು ಅಳಿಯನಿಗೆ ಮಾವನು ತಂದು ಕೊಟ್ಟ ತೊಟ್ಟಿಲನ್ನು ವರ್ಣಿಸುವುದರೊಂದಿಗೆ ತೊಟ್ಟಿಲ ಶಾಸ್ತ್ರದ ಬಗ್ಗೆ ತಿಳಿಸಿ ಕನಸಿನಲ್ಲಿ ದೇವರೊಂದಿಗೆ ಆಡಲು ಹೋಗುವ ಮುಗ್ಧ ಕಂದನಿಗೆ ಹೇಗೆ ತಾಯಿ ನೆನಪಾದಳು ಎನ್ನುವುದನ್ನು ಓದುವಾಗ ತುಟಿಯಲ್ಲಿ ಸ್ವಲ್ಪವಾದರೂ ನಗು ಮೂಡದೆ ಇರಲಾರದು. ಸೂರ್ಯ, ಚಂದ್ರ, ಹಣ್ಣು, ಮೊಲ, ನಾಯಿಮರಿ, ತೆಂಗಿನಕಾಯಿ, ಮಾವು, ಗಿಳಿ, ದನ-ಗೋವು, ಅಂಗಿ, ಚಪ್ಪಲಿ, ನದಿ, ದನ, ನಾಗರಹಾವು, ಹೂಗಳು, ಮಲ್ಲಿಗೆ, ತಾರೆಗಳು, ಅನ್ನದಾತ, ಮೋಡ ಮತ್ತು ಮಳೆ, ಚಂದಿರ, ಮರ-ಗಿಡ, ಕೆರೆ ಇತ್ಯಾದಿ ಗೀತೆಗಳು ಆಯಾಯ ವಿಷಯದ ಬಗೆಗಿನ ಪ್ರಾಥಮಿಕ ಮಾಹಿತಿಯನ್ನು ರಸವತ್ತಾಗಿ ಮಕ್ಕಳಿಗೆ ಒದಗಿಸುವಂತೆ ರಚಿಸಲಾಗಿದೆ. ಗೆಲುವು ತರಲು ಬೆವರು ಸುರಿಸಿ ದುಡಿದು ತಿನ್ನಬೇಕು. ದುಡಿಮೆಯಲ್ಲೆ ಸುಖವಿದೆ, ಸಿರಿ-ಸಂಪತ್ತಿಗಾಗಿ ದುಡಿಮೆಯೊಂದೇ ಉತ್ತಮ ದಾರಿ ಎನ್ನುವ ಸಂದೇಶವನ್ನು ಕವಿಯು ತಮ್ಮ ಹಲವಾರು ಕವಿತೆಗಳಲ್ಲಿ ವ್ಯಕ್ತ ಪಡಸಿದ್ದಾರೆ. ಯಾರಿಗೂ ಮೋಸ ಮಾಡಬೇಡ, ಪಾಪಿಯಾಗಬೇಡ, ದುಡಿಮೆಯೇ ಸುಖದದಾರಿ ಎಂಬುದನ್ನುಕವನದಲ್ಲಿ ಬೋಧಿಸಿರುವುದು ಮೌಲ್ಯಯುತವಾಗಿವೆ. ನೀರಿನ ಮೂಲಗಳು ಅದರ ಸದುಪಯೋಗ ಹಾಗೂ ಅದನ್ನು ಮಲೀನವಾಗದ ಹಾಗೆ ನೋಡಿಕೊಳ್ಳ ಬೇಕೆಂಬ ಎಚ್ಚರಿಕೆಯನ್ನು ಕವಿಗಳು ತಮ್ಮ ಕವನದ ಮೂಲಕ ಮಕ್ಕಳಿಗೆ ನೀಡಿದ್ದಾರೆ.
ಪರೀಕ್ಷೆಯ ಕುರಿತು ಹೆದರಿಕೆ ಬೇಡ, ಗಳಿಸಿದ ಜ್ಞಾನವನ್ನು ಪರೀಕ್ಷಿಸುವ ಪರೀಕ್ಷೆ ಯನ್ನು ಹೇಗೆ ಎದುರಿಸ ಬೇಕು ಎನ್ನುವುದನ್ನು ಸರಳವಾಗಿ, ಚೆನ್ನಾಗಿ ಬಿಂಬಿಸಿ ಮಕ್ಕಳಿಗಿರುವ ಪರೀಕ್ಷೆಯ ಭಯವನ್ನು ಹೋಗಲಾಡಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಇದ್ದಲನ್ನು ನುಂಗುವ ಉಗಿಬಂಡಿ ಅಂದರೆ ರೈಲಿನ ಬಗೆಗಿನ ಪದ್ಯದಲ್ಲಿ ಬಡವರಿಂದ ಬಲ್ಲಿದರ ವರೆಗೆ ರೈಲು ಹೇಗೆ ಉಪಯುಕ್ತ ಅನ್ನುವುದನ್ನು ತಿಳಿಸಿ ಕೊಡುತ್ತಾರೆ.
ಈಗ ಅಂತೂ ಎಲ್ಲಡೆಯೂ ಪ್ರಳಯಾಂತಕ `ಕರೋನಾ ತುಂಬಾ ಆಟೋಪವನ್ನು ಮಾಡುತ್ತಿದೆ. ಈ ಕಷ್ಟಕರ ಸಂದರ್ಭದಲ್ಲಿ ಯಾವ ರೀತಿಯ ಜಾಗೃತೆ ತೆಗೆದು ಕೊಳ್ಳಬೇಕು ಅನ್ನುವುದನ್ನು `ಕರೋನಾ ಜಾಗೃತ ಗೀತೆಯಲ್ಲಿ ತಿಳಿಸಿ ಕೊಡುವುದರೊಂದಿಗೆ `ಕಸ ಎನ್ನುವ ಪದ್ಯದಲ್ಲಿ ಸ್ವಚ್ಛತೆಯ ಮಹತ್ವವನ್ನು ಮಕ್ಕಳಿಗೆ ಮನಗಾಣಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ``ಬಾರೋ ಕೂಸೆ ಪದ್ಯದಲ್ಲಿ ಮುಗ್ಧ ಕಂದಮ್ಮನ ಗಲ್ಲ, ಬೆರಳು, ಕಣ್ಣು, ಚರ್ಮ, ಕೂದಲುಗಳ ವರ್ಣನೆಯನ್ನು ಮಾಡಿ ಮಗುವೊಂದನ್ನು ಎತ್ತಿಕೊಳ್ಳವಾಸೆಯನ್ನು ವ್ಯಕ್ತ ಪಡಿಸುತ್ತಾರೆ.
ರೈತ ಹೊಲವ ಉಳುವನು, ಅನ್ನಧಾತ , ಜೋಳ ರಾಗಿ ತುಂಬಲಿ, ಶ್ರಮದ ಕೆಲಸ ಮಾಡಿ ಇತ್ಯಾದಿ ಪದ್ಯಗಳು ರೈತರ, ಕೃಷಿಯ ಮಹತ್ವವನ್ನು ಸಾರುವುದರೊಂದಿಗೆ ಅವರ ಶ್ರಮದ ಕಲ್ಪನೆಯನ್ನೂ ಮಕ್ಕಳಿಗೆ ಮಾಡಿಕೊಡುತ್ತವೆ. ಯೋಗಾಸನ ಪದ್ಯದಲ್ಲಿ ಯೋಗದ ಮಹತವ ಇದ್ದರೆ `ಕನ್ನಡ ಎಂಬ ಪದ್ಯದಲ್ಲಿ ತಾಯಿಭಾಷೆ `ಕನ್ನಡ ತಾಯಿ, ಕನ್ನಡ ನಾಡಿನ ಬಗ್ಗೆ ತಿಳಿಸಿ ಕೊಡುತ್ತಾ ನಮ್ಮ ಮಾತೃಭಾಷೆಯ ಸಾವಿರಾರು ವರ್ಷಗಳ ಇತಿಹಾಸ ಹೆಮ್ಮೆಯ ಕನ್ನಡವನ್ನು ಹೆಚ್ಚು ಹೆಚ್ಚು ವ್ಯವಹಾರದಲ್ಲಿ ಬಳಕೆ ಮಾಡಿ ಮಾತೃಭೂಮಿಯ ಋಣ ತೀರಿಸಬೇಕೆಂಬ ಆಶಯವನ್ನು ವ್ಯಕ್ತ ಪಡಿಸುತ್ತಾರೆ. ನಾಗರ ಹಾವಿನ ಬಗ್ಗೆ, ಮಿಂಚಂಚೆ, ವಾಟ್ಸ್‌ಫ್‌ಗಳ ಕಾರಣದಿಂದ ಮೂಲೆಗುಂಪಾಗುತ್ತಿರುವ `ಅಂಚೆ ಅಣ್ಣನ ಬಗ್ಗೆಯೂ ಹೃದಯಂಗಮ ಪದ್ಯಗಳನ್ನು ಕವಿಗಳು ನೀಡಿದ್ದಾರೆ.
ನರಿಯೊಂದು ಕೋಳಿಯೊಂದನ್ನು ಎತ್ತಿಕೊಂಡು ಹೋಗುವಾಗ ಅದರ ಗೆಳೆಯ ನಾಯಿ ಬಂದು ರಕ್ಷಿಸುವ ಕತೆಯನ್ನೂ ಕಾವ್ಯದ ಮೂಲಕ ಮಕ್ಕಳ ಮನಸ್ಸನ್ನು ಮುದಗೊಳಿಸುವಂತೆ ನೀಡುವ ಪ್ರಯತ್ನದಲ್ಲಿ `ನರಿ ಕೋಳಿ ನಾಯಿ ಪದ್ಯದಲ್ಲಿ ಯಶಸ್ವಿಯಾಗಿದ್ದಾರೆ. .....
©2024 Book Brahma Private Limited.