ಲೇಖಕ ಶಂಕರದೇವರು ಹಿರೇಮಠ ಅವರ ಮಕ್ಕಳ ಕವನಗಳ ಸಂಗ್ರಹ ಚೆಲುವ ಚಿಣ್ಣರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಚ.ನ. ಅಶೋಕ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಶ್ರೀ ಶಂಕರದೇವರು ಹಿರೇಮಠ ಸೃಜನಶೀಲ ಬರಹಗಾರರು, ಪರಿಸರ ಪ್ರೇಮಿಗಳು, ಬಹುಮುಖ ಪ್ರತಿಭೆಯುಳ್ಳ ಹಸನ್ಮುಖಿ ಶ್ರೀ ಶಂಕರದೇವರು ಹಿರೇಮಠ ಸಾಹಿತ್ಯ ಕ್ಷೇತ್ರದಲ್ಲಿ ಕಿರಿಯ ವಯಸ್ಸಿನಲ್ಲೇ ಹಿರಿಯ ಅನುಭವವನ್ನು ಕಂಡವರು. ಸಾಹಿತ್ಯದ ಒಡನಾಟವನ್ನು ಬಾಲ್ಯದಿಂದಲೇ ಬೆಸೆದುಕೊಂಡವರು, ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡುವುದರ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಸಾಧನೆ ತೋರಿದ್ದಾರೆ. ಇವರು ರಾಯಚೂರು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದು ಸಾಹಿತ್ಯ ರಚನೆಯ ಜೊತೆಗೆ ಸಂಘಟನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸಕ್ರಿಯವಾಗಿ ಮಕ್ಕಳ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ನಡೆಸುತ್ತಿದ್ದಾರೆ. ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದು ನೂರಾರು ಮುಗ್ಧ ಮನಸ್ಸುಗಳಂಗಳದಲ್ಲಿ ಸಾಹಿತ್ಯ ಸಿಂಚನವನ್ನು ಮೂಡಿಸುವ ಕೈಂಕರ್ಯದಲ್ಲಿ ಹೊರತರುತ್ತಿರುವ 'ಚೆಲುವ ಚಿಣ್ಣರು' ಕವನ ಸಂಕಲನವು ಮಕ್ಕಳ ಹಾಡಾಗಿದ್ದು ಮಕ್ಕಳ ಮುಗ್ಧ ಮನಸ್ಸಿನ ಬಣ್ಣಬಣ್ಣದ ಚಿತ್ತಾರದ ಭಾವಾಂತರಂಗವನ್ನು ಬಿಚ್ಚಿಡುತ್ತವೆ. ಇಲ್ಲಿ ಶ್ರೀಯುತರೆ ಮಕ್ಕಳಾಗಿ ರಚಿಸಿದ ಪದ್ಯದ ಪ್ರತಿಯೊಂದು ಪದಗುಚ್ಛಗಳಲ್ಲಿಯೂ ಸ್ವಚ್ಛಂದತೆಯನ್ನು ಕಾಯ್ದುಕೊ೦ಡ೦ತಿದೆ.ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯ ರಚನೆ ಅತೀ ವಿರಳ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಶಂಕರದೇವರು ಹಿರೇಮಠರವರಿಂದ ರಚಿತವಾಗಿರುವ ಈ ಮಕ್ಕಳ ಸಾಹಿತ್ಯ ಕರುನಾಡ ಚಂದದ ಚಿಣ್ಣರ ಮನಸೂರೆಗೊಳ್ಳುವುದು ಖಂಡಿತ, ಮುಂದೆಯೂ ಹೆಚ್ಚು ಹೆಚ್ಚು ಮಕ್ಕಳ ಸಾಹಿತ್ಯ ರಚಿತವಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
©2024 Book Brahma Private Limited.