ಪುಟಾಣಿ ಪ್ರಾಸಗಳು-ರಾಜಶೇಖರ ಕುಕ್ಕುಂದಾ ಅವರು ಮಕ್ಕಳಿಗಾಗಿ ಬರೆದ ಕವಿತೆಗಳ ಸಂಕಲನ. ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲ ಕೃತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ ‘ಪುಟಾಣಿಗಳದೇ ಒಂದು ಜಗತ್ತು. ಅದರೊಳಗೆ ಇಳಿಯುವುದು, ಇಳಿದು ಒಂದಾಗಿ ಹೋಗುವುದು ಒಂದು ಬಲು ಸೊಗಸಿನ ಸಂಗತಿಯೆ. ಅದರದೇ ಆದ ನವಿರುಂಟು ಅಲ್ಲಿ, ಅದರದೇ ಆದ ಬೆರಗುಂಟು ಅಲ್ಲಿ, ಅದರದೇ ಆದ ಚುರುಕು, ಚಟುವಟಿಕೆ ಉಂಟು ಅಲ್ಲಿ. ಅದೊಂದು ಗುಟ್ಟಿನ ಪೆಟ್ಟಿಗೆ, ಪ್ರತಿಸಲವೂ ಹೊಸ ಪ್ಯಾಕುಮಾಡಿಕೊಳ್ಳುವ ಗಿಫ್ಟು ! ಇಂಥ ಗಿಫ್ಟಿನ ಪ್ಯಾಕೊಂದು ಬಿಡಿಸಿಕೊಳ್ಳಲು ಸಿದ್ಧವಾಗಿದೆ ಇಲ್ಲಿ ! ಬೆಂಗಳೂರಿನಲಿ ಮೆಜೆಸ್ಟಿಕ್ಕಿನಲಿ ಸು ಸು ಮಾಡಲಿಕ್ಕೆ ಜಾಗ ಹುಡುಕುತಿತ್ತು ಇಲಿ ! ಅಂಥ ಇಲಿಯನ್ನ ನೀವೂ ಭೇಟಿಯಾಗಲೇ ಬೇಕು, ಅದರ ಜೊತೆ ಮಾತಿಗಿಳಿಯಬೇಕು, ಹೂಂ ಹೂಂ, ಪುಟಾಣಿಗಳ ಬಳಗಕ್ಕೆ ಸೇರಬೇಕೆಂದರೆ ಹಾಗೆಲ್ಲ ಮಾಡಲೇ ಬೇಕು ! ಈ ಬಗೆಯ ಪ್ರೀತಿಯ ಒತ್ತಾಯ ತಂದಿರುವ ಕವಿ ರಾಜಶೇಖರ ಕುಕ್ಕುಂದಾ ಈಗಾಗಲೇ ಮಕ್ಕಳ ಲೋಕದಲ್ಲಿ ತಮ್ಮನ್ನು ಸಖತ್ತಾಗಿಯೇ ಗುರುತಿಸಿಕೊಂಡವರು. ‘ಚೆಲುವ ಚಂದಿರ’ ಮತ್ತು ‘ಗೋಲ ಗುಮ್ಮಟ’-ಮಕ್ಕಳ ಕವನ ಸಂಕಲನಗಳನ್ನ ತಂದು ಈಗ ಒಂದಿಷ್ಟು ಸಮಯ ಕಳೆದಿದ್ದರೂ ಹಾಲುಗಲ್ಲದ ಹುಡುಗರ ಗುಂಗಿನಲ್ಲಿ ತೇಲಿಕೊಂಡೇ ಇರುವವರು. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕ ವೃತ್ತಿಯ ಬಿಡುವಿಲ್ಲದ ತೊಡಗುವಿಕೆಯಲ್ಲೂ ಮಕ್ಕಳೆಡೆಗೆ ಸದಾ ಮುಖ ಮಾಡಿಕೊಂಡಿರುವವರು. ಅದೊಂದು ಒಳಗಿನ ಬತ್ತದ ಹಂಬಲ. ಹಾಗಾಗಿಯೇ ಕಲಬುರ್ಗಿಯ ಬಿಸಿಲಿನೊಳಗಣ ನೆರಳ ಕನಸಿನಂತೆ ಅವರೊಳಗೆ ಮಕ್ಕಳ ಮಾತುಕತೆಗಳು ಹಬ್ಬಿ ಹಂದರವಾಗುತ್ತಲೇ ಇರುತ್ತವೆ, ಚಿಗುರಿ ಚಿಮ್ಮಿಕೊಳ್ಳಲು ಸದಾ ಕಾಯುತ್ತಲೇ ಇರುತ್ತವೆ. ಹೀಗೆ ಮೌನದೊಳಡಗಿದ ಕಟ್ಟಿನೊಳಗಿಂದ ಇದೊಂದು ಸಿವುಡು. ‘ಬಾನ ಬಯಲ ಅಂಗಳ’ ಕಂಡ ಈ ಕವಿ ಅದರಲ್ಲೀಗ ಪುಟ್ಟ ಪುಟ್ಟ ಚುಕ್ಕೆಗಳನ್ನ ಇಟ್ಟಿದ್ದಾರೆ. ಆಡಲು ಚಿಣ್ಣರನ್ನ ಕರೆದಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ಜೇಡ, ಹಲ್ಲಿ, ಜಿರಲೆ ಸಾಕುಮಾಡಿ ತರಲೆ ಚೀನಾದಲ್ಲಿ ನಿಮ್ಮನ್ನೆಲ್ಲ ತಿಂಡಿಗಿಟ್ಟು ಬರಲೆ?
ಮಕ್ಕಳ ಮನವರಳಿಸುವ ಬೆಡಗಿನ ಕವಿತೆಗಳು
ಇಲ್ಲಿನ ಕವಿತೆಗಳು ಥಟ್ಟನೆ ಕಣ್ಣು ಕುಕ್ಕುವಂಥವು. ಮಕ್ಕಳ ಮನವರಳಿಸುವ ಬೆಡಗು ಇಲ್ಲಿನ ಕವಿತೆಗಳಲ್ಲಿದೆ. ಪುಟ್ಟ ಪುಟ್ಟ ನಾಲ್ಕು ಸಾಲಿನ ಕವಿತೆಗಳಲ್ಲಿ ಎಲ್ಲೂ ಪ್ರಾಸಕ್ಕಾಗಿ ಗುದ್ದಾಟ, ಕವಿತೆಯ ವಸ್ತುವಿಗಾಗಿ ಒದ್ದಾಟ ಕಾಣುವುದಿಲ್ಲ. ಚಿಕ್ಕ-ಚೊಕ್ಕ ಪದ್ಯಗಳಲ್ಲಿ ಹೊಸತನವಿದೆ, ಲವಲವಿಕೆಯಿದೆ, ಮಕ್ಕಳಿಗಾಗಿಯೇ ಹೇಳಿ ಮಾಡಿಸಿದಂತಹ ಸಂಗತಿಗಳಿವೆ. ಇಲ್ಲಿನ ಯಾವ ಕವಿತೆಯನ್ನು ಹೆಕ್ಕಿದರೂ ಅತಿ ಸುಂದರ ಹೆಣಿಗೆ, ಮಕ್ಕಳೇ ಗುನುಗುವಂತಹ ಗೇಯತೆ, ಲಯವಿದೆ. ಟೀವಿ ಉಂಟುಮಾಡುತ್ತಿರುವ ದಾಳಿಯ ಚಿತ್ರಣವನ್ನು ಕವಿ ಕಟ್ಟಿಕೊಡುವ ಬಗೆ ಅನನ್ಯ ವೆನಿಸಿಬಿಡುತ್ತದೆ. ಇಲ್ಲಿನ ಪ್ರತಿ ಕವಿತೆಯೂ ಮಕ್ಕಳಿಗೆ ಓದಲು ಅನುವಾಗುವಂತಹ ಸರಳ ಭಾಷೆಯಲ್ಲಿದ್ದು ಮೂರು ನಾಲ್ಕು ಸಾಲುಗಳಲ್ಲೇ ಅವರನ್ನು ರಂಜಿಸುವ,ನಗಿಸುವ ಗಂಭೀರ ಚಿಂತನೆಗೂ ಹಚ್ಚುವ ಕೆಲಸ ಅಚ್ಚುಕಟ್ಟಾಗಿ ಮಾಡುತ್ತದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಒಂದು ಮಕ್ಕಳ ಕೃತಿ ಹೇಗಿರಬೇಕೋ ಹಾಗೆಯೇ ರೂಪತಾಳಿದ ಕೃತಿ ಯಿದು. ಮುಖಪುಟದಿಂದ ಕೊನೆಯ ಪುಟದವರೆಗೂ ಬಳಕೆಯಾಗಿರುವ ಚಿತ್ರಗಳು ಮಕ್ಕಳ ಕೃತಿಯ ಆಶಯವನ್ನು ತಣಿಸುತ್ತವೆ. ಹಿಂದಿನ ಮಕ್ಕಳ ಸಾಹಿತ್ಯ ಸಮೃದ್ಧವಾಗಿದ್ದರೂ ಬದಲಾದ ಕಾಲಮಾನದ ಇಂದಿನ ಮಕ್ಕಳಿಗೆ ಅವು ಪ್ರಸ್ತುತವೇ ಅಲ್ಲವೇ ಎಂಬ ಚಿಂತನೆ ನಡೆಯುತ್ತಿರುತ್ತದೆ. ಇಂದಿನ ಮಕ್ಕಳ ಸಾಹಿತ್ಯ ಬಹುಪಾಲು ಹಳೆಯ ಸಾಹಿತ್ಯದ ಅನುಕರಣೆಯಂತೆ ಮುಂದುವರೆದಿರುವುದನ್ನು ನೋಡುತ್ತೇವೆ. ಅವು ಕಾಲಕ್ಕೆ ತಕ್ಕಂತೆ 'ಅಪ್ ಡೇಟ್' ಆಗದಿದ್ದಲ್ಲಿ ಇಂದಿನ ಮಕ್ಕಳ ಆಶಯಗಳನ್ನು ತಿಳಿಸುವುದಾದರೂ ಹೇಗೆ? ರಾಜಶೇಖರ ಕುಕ್ಕುಂದಾರ ಕವಿತೆಗಳು ಅದಕ್ಕೆ ಹೊರತಾದವುಗಳು. ಅವರು ಇಂದಿನ ಮಕ್ಕಳಿಗೇನು ಬೇಕೋ ಅದನ್ನು ಹೇಗೆ ಬೇಕೋ ಅದಕ್ಕೆ ತಕ್ಕುದಾದ ರೀತಿಯಲ್ಲಿ ಬರೆದಿರುವುದು ಇನ್ನೊಂದು ವಿಶೇಷ.
- ಶಿವಮೊಗ್ಗದ ಕರ್ನಾಟಕ ಸಂಘದ "ಡಾ.ನಾ ಡಿಸೋಜ" ಬಹುಮಾನ-೨೦೧೨ ತೀರ್ಪುಗಾರರ ಅಭಿಮತ.
©2024 Book Brahma Private Limited.