ಅಜ್ಜನ ಹಲ್ಲು ಸೆಟ್ಟು-ಗುಂಡೂರಾವ್ ಧೇಸಾಯಿ ಅವರ ಮಕ್ಕಳ ಕವನ ಸಂಕಲನ. ಇಲ್ಲಿ ಒಟ್ಟು 45 ಕವಿತೆಗಳಿವೆ. ಸಾಹಿತಿ ಸೂಗೂರೇಶ ಹಿರೇಮಠ ಕೃತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ, ‘ಅಜ್ಜನ ಹಲ್ಲು ಸೆಟ್ಟು ಮಕ್ಕಳಸಾಹಿತ್ಯದ ಮೂಲ ಪುರುಷರೆಂದರೆ ಅಜ್ಜ ಅಜ್ಜಿ. ಮೊಬೈಲ್ ಟೀವಿಗಳಿಲ್ಲ ಕಾಲದಲ್ಲಿ ನಮ್ಮ ಅಜ್ಜ ಅಜ್ಜಿಯರು ಕತೆ ಹೇಳಿತ್ತಾ ಮಕ್ಕಳಿಗೆ ಮೌಲ್ಯಗಳನ್ನೂ ಹಾಗೂ ಮನರಂಜನೆಯನ್ನು ನೀಡುತ್ತಾ ಶಾಲೆಗಳು ಕಲಿಸದಂತಹ ಸೃಜನಾತ್ಮಕತೆಯನ್ನು ಅಜ್ಜ ಅಜ್ಜಿಯರು ಹೇಳಿಕೊಡುತ್ತಿದ್ದರು. ಹೀಗಿರುವಾಗ ಮಕ್ಕಳಿಗೆ ಅಜ್ಜನೆಂದರೆ ಹಿಗ್ಗೊಹಿಗ್ಗು ಅಂತಹ ಹಿಗ್ಗು ಕೊಡುವಂತಹ ಕೃತಿ ಅಜ್ಜನ ಹಲ್ಲು ಸೆಟ್ಟು. ಸ್ವತಃ ಶಿಕ್ಷಕರು, ಹಾಸ್ಯ ಪ್ರಬಂಧಕಾರರಾಗಿರುವ ಲೇಖಕರು ಮಕ್ಕಳಿಗಾಗಿ ಕವಿತೆಗಳನ್ನು ಅತ್ಯಂತ ಲವಲವಿಕೆಯಿಂದ ಕಟ್ಟಿಕೊಟ್ಟಿದ್ದಾರೆ. ಪ್ರತಿ ಪದ್ಯಕ್ಕೊಂದು ಅರ್ಥವತ್ತಾದ ಚಿತ್ರಗಳು ಅತ್ಯಂತ ಸೂಕ್ತವಾಗಿವೆ. ಖ್ಯಾತ ಕಲಾವಿದರಾದ ಪಿಎಬಿ ಈಶ್ವರ ಮುಖಪುಟ ಮತ್ತು ಒಳಪುಟಗಳ ಚಿತ್ರ ಬಿಡಿಸಿದ್ದಾರೆ. ಪುಸ್ತಕದ ಮೊದಲ ಪದ್ಯವು 'ಚಂದಮಾಮ' ಮುನಿಡುವಂತಿದೆ. ಅಜ್ಜನ ಹಲ್ಲು ಸೆಟ್ಟು ಎಂಬ ಪದ್ಯದಲ್ಲಿ ಪುಟ್ಟುವಿನ ಎಡವಟ್ಟನ್ನು ಕಟ್ಟಿಕೊಡುತ್ತಾರೆ. ಸೂರ್ಯ ಎಂಬ ಪದ್ಯದಲ್ಲಿ ಸೂರ್ಯನ ಸೊಕ್ಕನ್ನು ತಣಿಸಿದ ಸಣ್ಣ ದೀಪದ ಕುರಿತು ಹೇಳುತ್ತಾರೆ ದೇಹದ ಕುರಿತು ಜೀರ್ಣಾಂಗವ್ಯೂಹದ ಕುರಿತು ಒಂದು ಪಾಠ ಹೇಳುವಷ್ಟನ್ನು ಒಂದು ಪದ್ಯದಲ್ಲಿ ಹಿಡಿದಿಟ್ಟಿದ್ದಾರೆ. ಹೀಗೆ ಮಕ್ಕಳಿಗೆ ಮನರಂಜನೆಯ ಜೊತೆಗೆ ಜ್ಞಾನವನ್ನೂ ಒದಗಿಸುತ್ತಾರೆ. ಗುಮ್ಮ ಪದ್ಯದಲ್ಲಿ ಅಮ್ಮ ಊಟ ಮಾಡಿಸಲು ಮಾಡುವ ಪರಿಪಾಟಲನ್ನು ತಿಳಿಸುತ್ತಾರೆ. ಪದ್ಯಗಳು ಮಕ್ಕಳಿಗಾಗಿ ಬರೆದಿದ್ದರೂ ಎಲ್ಲರ ಜ್ಞಾನಕ್ಕೆ ಅನುಕೂಲವಾಗಿದೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.