ಚಿಣ್ಣರ ಕನಸಿನ ಬಣ್ಣದ ಲೋಕ ಶೋಭಾ ಹರಿಪ್ರಸಾದ್ ಅವರ ಕವನಸಂಕಲನವಾಗಿದೆ. ಇತ್ತೀಚೆಗೆ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕವನಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಬೆಳಕು ಕಾಣುತ್ತಿದ್ದು, ಕನ್ನಡಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿವೆ. ನವ್ಯ, ನವೀನ, ಬಂಡಾಯ ಹಾಗೂ ಜಾನಪದ ಶೈಲಿಯ ಆ ಕವನಗಳು ಓದುಗರ ಮನಕ್ಕೆ ಸುಲಭದಲ್ಲಿ ನಾಟಬಹುದು ಎಂದೋ, ಗೇಯತೆಯುಳ್ಳದ್ದು ಎಂದೋ ಹಾಡುವುದಕ್ಕೆ ಸುಲಭವೆಂದೋ ರಚಿತಗೊಳ್ಳುತ್ತಿವೆ. ಆದರೆ, ಮಕ್ಕಳಿಗಾಗಿಯೇ ರಚಿತವಾಗುವ ಕವನಗಳು ಬಹಳ ಕಡಿಮೆಯೆಂದೇ ಹೇಳಬಹುದು. ಈ ಕೊರತೆಯನ್ನು ಶೋಭಾ ಹರಿಪ್ರಸಾದ್‌ರವರ 'ಚಿಣ್ಣರ ಕನಸಿನ ಬಣ್ಣದ ಲೋಕ' ಕವನಸಂಕಲನವು ನೀಗಿಸುತ್ತಿರುವುದು ಬಹಳ ಹೆಮ್ಮೆಯ ವಿಚಾರವಾಗಿದೆ. ಅದರಲ್ಲೂ ಭೋಗಷಟ್ನದಿ, ಶರಷಟ್ಟದಿ, ಕುಸುಮ ಷಟ್ಟದಿ ಮುಂತಾದ ಛಂದೋಬದ್ಧತೆಯುಳ್ಳ ಈ ಕವನಗಳ ರಚನೆಯು ಸಾರಸ್ವತ ಲೋಕಕ್ಕೊಂದು ಹೆಮ್ಮೆಯ ಕನ್ನಡ ಕಾಣಿಕೆಯಾಗಿರುತ್ತದೆ. ಪ್ರಾಸಕ್ಕೂ ಸುಲಭದಲ್ಲಿ ಸಿಕ್ಕುವ ಹಾಗೂ ಮಕ್ಕಳ ಕಲ್ಪನೆಯನ್ನು ಕೆದರಿಸುವ ಈ ಸಂಕಲನದ ಕವನಗಳು ಎಲ್ಲ ಮಕ್ಕಳಿಗೂ ಪ್ರಿಯವೆನಿಸಬಹುದು. ಈ ಕವನ ಸಂಕಲನದ ಪುಟಗಳನ್ನು ತೆರೆಯುತ್ತಿದ್ದಂತೆಯೇ 'ಬಣ್ಣದ ಹೂವುಗಳು' ಕವನದಲ್ಲಿ ಹಲವಾರು ಕುಸುಮಗಳನ್ನು ಶರಷಟ್ಟದಿ ಛಂದಸ್ಸಿನಲ್ಲಿ ವರ್ಣಿಸಿರುವುದನ್ನು ಕಾಣಬಹುದು ಎಂದು ಗೀರಿಶ್ ಮೂರ್ನಾಡು ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.