‘ಚಂದ್ರನಿಗೆ ಟ್ಯಾಟೂ’ ಲೇಖಕಿ ಛಾಯಾ ಭಗವತಿ ಅವರು ರಚಿಸಿರುವ ಮಕ್ಕಳ ಕವಿತೆಗಳ ಸಂಕಲನ. ಈ ಕೃತಿಗೆ ಜಿ.ಪಿ. ಬಸವರಾಜು ಅವರ ಬೆನ್ನುಡಿ ಬರಹವಿದೆ. ಮಕ್ಕಳ ಪದ್ಯಗಳೆಂದರೆ ಮೊದಲು ಕಿವಿಗೆ ಹಿತವಾಗಿರಬೇಕು ನಾಲಗೆಯ ಮೇಲೆ ನಲಿದಾಡುವಂತಿರಬೇಕು. ಇಂಥ ಪದ್ಯಗಳನ್ನು, ಸಾಲುಗಳನ್ನು ಮಕ್ಕಳು ಕೇಳುತ್ತ, ಹೇಳುತ್ತ, ತಮ್ಮ ಅರಿವಿಗೆ ತಂದುಕೊಳ್ಳುವ ಮುನ್ನುವೇ ಎದೆಗೆ ಇಳಿಸಿಕೊಂಡು ಬಿಡುತ್ತಾರೆ. ಎದೆಗೆ ಇಳಿದ ಪದ್ಯಗಳು, ಅಲ್ಲಿಯೇ ಬಹಳ ಕಾಲ ಉಳಿದು, ನೆನೆದಾಗಲೆಲ್ಲಾ ನಾಲಗೆಯ ಮೇಲೆ ಕುಣಿದಾಡುತ್ತವೆ. ಛಾಯಾ ಭಗವತಿ ಅವರ ಈ ಪದ್ಯಗಳಲ್ಲಿ ಇಂಥ ಗುಣವಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ ಜಿ.ಪಿ. ಬಸವರಾಜು.
ಈ ಪದ್ಯಗಳಲ್ಲಿನ ಲಯ, ನಡೆ, ಏರಿಳಿತವು, ಪ್ರಾಸ, ಕಲ್ಪನೆಯ ವಿಲಾಸ ಎಲ್ಲವೂ ಮಕ್ಕಳನ್ನು ಥಟ್ಟನೆ ಸೆಳೆದುಕೊಂಡು ಗೆಳೆತನ ಬೆಳೆಸುತ್ತವೆ. ಮಕ್ಕಳು ಈ ಪದ್ಯಗಳನ್ನು, ಸಾಲುಗಳನ್ನು ಹೇಳಿ ಹೇಳಿ, ಹಾಡಿ ಹಾಡಿ ನಲಿಯಬಹುದು. ಸರಳತೆ ಎಂಬುದು ಕೇವಲ ಭಾಷೆಗೆ ಸಂಬಂಧಪಟ್ಟದ್ದಲ್ಲ:ಗ್ರಹಿಕೆ, ಅರ್ಥ, ಕಲ್ಪನೆಯ ಜೊತೆ ಬೆರೆತದ್ದೂ ಹೌದು ಎಂಬುದನ್ನು ಈ ಪದ್ಯಗಳು ನೆನಪಿಸುತ್ತವೆ. ಉಂಡೆ. ಚೆಕ್ಕುಲಿ, ಕವಡೆ, ವಡೆ. ಒಬ್ಬಟ್ಟು, ಕುಂಟೆ, ರಂಟೆ, ನೇಗಿಲು, ಕುರುಷಿ, ಹಾರೆ, ಸಲಿಕೆ ಹೀಗೆ ಗ್ರಾಮೀಣ ಬದುಕಿನ, ಸಂಸ್ಕೃತಿಯ ಜೊತೆ ತಳುಕು ಹಾಕಿಕೊಂಡಿರುವ ಈ ಪದ್ಯಗಳು ಹಳ್ಳಿಗಾಡಿನ ಮಕ್ಕಳಿಗೂ ಹಿತವಾಗುವಂತಿವೆ. ಮಕ್ಕಳ ಪದ್ಯಗಳು ಸರಳವಾಗಿ ಕಂಡರೂ, ಕವಿಗಳಿಗೆ ಇಂಥ ರಚನೆ ದೊಡ್ಡ ಸವಾಲು. ಈ ಸವಾಲನ್ನು ಛಾಯಾ ಸರಿಯಾಗಿ ಎದುರಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.