‘ಮಿಠಾಯಿ ಮಾಮ’ ಕೃತಿಯು ವೀರೇಶ.ಬ.ಕುರಿ ಸೋಂಪುರ ಅವರ ಮಕ್ಕಳ ಕವನ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಅರುಣಾ ನರೇಂದ್ರ ಅವರು, ಪ್ರಚಲಿತ ದಿನಮಾನಗಳಲ್ಲಿ ಕನ್ನಡ ಸಾಹಿತ್ಯ ವಲಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಅಂತೆಯೇ ಇಂದು ಮಕ್ಕಳ ಸಾಹಿತ್ಯವು ಸಮೃದ್ಧವಾಗಿ ಮತ್ತು ಸತ್ವಯುತವಾಗಿ ಹರಿದು ಬರುತ್ತಿದೆ. ಈ ನಿಟ್ಟಿನಲ್ಲಿ, ಶಿಕ್ಷಕ ಸಾಹಿತಿ, ಸಹೋದರ ವೀರೇಶ ಕುರಿ ಸೋಂಪುರ ಅವರು 'ಮಿಠಾಯಿ ಮಾಮ' ಕೃತಿಯ ಮೂಲಕ ಮಕ್ಕಳ ಸಾಹಿತ್ಯ ಲೋಕವನ್ನು ಅಧಿಕೃತವಾಗಿ ಪ್ರವೇಶಿಸಿದ್ದಾರೆ. ಚುಟುಕು, ಕವಿತೆ, ತತ್ರ ಪದಗಳು ಮತ್ತು ಆಧುನಿಕ ವಚನಗಳ ರಚನೆಯ ಮೂಲಕ ಸಾಹಿತ್ಯ ಲೋಕದಲ್ಲಿ ಒಬ್ಬ ಉತ್ತಮ ಬರಹಗಾರರಾಗಿ ಗುರುತಿಸಿಕೊಂಡಿರುವ ಇವರು ಸದಾ ಹೊಸತನಕ್ಕೆ ತುಡಿಯುವ ಯುವ ಪ್ರತಿಭೆ, ಮೂಲತಃ ಶಿಕ್ಷಕರಾಗಿದ್ದರಿಂದ ಮಕ್ಕಳ ಜೊತೆಗಿನ ಒಡನಾಟದಿಂದ ಮಕ್ಕಳ ಸಾಹಿತ್ಯ ರಚನೆಯಲ್ಲಿ ಹೆಚ್ಚು ಒಲವನ್ನು ತೋರುತ್ತಿರುವುದು ಗಮನಾರ್ಹವಾಗಿದೆ. ಮಕ್ಕಳ ಸಾಹಿತ್ಯವು ಇನ್ನಿತರ ಸಾಹಿತ್ಯಕ್ಕಿಂತಲೂ ಭಿನ್ನವೂ, ರಂಜನೀಯವೂ ಆಗಿರುತ್ತದೆ. ಮಕ್ಕಳ ಮನಸ್ಸನ್ನು ಅರಿತು ಅವರವರ ವಯೋಮಾನಕ್ಕನುಸಾರವಾಗಿ ಮತ್ತು ಆಸಕ್ತಿ ಹಾಗೂ ಅಭಿರುಚಿಗೆ ತಕ್ಕಂತೆ ಸಾಹಿತ್ಯ ಕಟ್ಟಿ ಕೊಡುವುದು ಸುಲಭದ ಮಾತೇನಲ್ಲ. ಮಕ್ಕಳಿಗೆ ಮುದ ನೀಡುವ ಹತ್ತು-ಹಲವು ವಿಷಯ ವಸ್ತುಗಳನ್ನು ಇಟ್ಟುಕೊಂಡು ಸರಳವಾದ ಮತ್ತು ಪ್ರಾಸಬದ್ಧವಾದ ಕವಿತೆಗಳ ಗುಚ್ಛವನ್ನು ಮಕ್ಕಳ ಕೈಗಿತ್ತಿದ್ದಾರೆ. ಪ್ರಸ್ತುತ, ಈ ಕೃತಿಯಲ್ಲಿ ಒಟ್ಟು ಅರವತ್ತು ಕವಿತೆಗಳಿವೆ. ಕಿಡಿಗೇಡಿ ಕಿಟ್ಟ ಪುಟಾಣಿ ಗೊಂಬೆ, ಚೆಲುವ ಚಿಟ್ಟೆ, ನಾನೂ ಆಗುವ ಗಾಂಧಿ, ಕನ್ನಡ ಕವಿಗಳ ಹಾಡು ಮುಂತಾದ ಕವಿತೆಗಳು ತಮ್ಮ ಗೇಯತೆಯ ಗುಣದಿಂದಾಗಿ ಮಕ್ಕಳ ಮನ ಸೂರೆಗೊಳ್ಳುತ್ತವೆ'ಎನ್ನುತ್ತಾರೆ.
©2024 Book Brahma Private Limited.