ಲೇಖಕ ಶಂಕರದೇವರು ಹಿರೇಮಠ ಅವರು ಸಂಪಾದಿಸಿರುವ ಕೃತಿ ಪಾಟಿ ಮೇಲಿ ಪಾಟಿ ನಮ್ಮ ಶಾಲಿ ಸೂಟಿ. ಇದು ರಾಜ್ಯಮಟ್ಟದ ಪ್ರಾತಿನಿಧಿಕ ಶಿಶುಪ್ರಾಸಗಳ ಸಂಕಲನವಾಗಿದೆ. ಶಾಲಾ ವಿದ್ಯಾರ್ಥಿಗಳು ಬರೆದ ಶಿಶು ಪ್ರಾಸ ಗೀತೆಗಳ ಸಂಗ್ರಹವಿದು.
ಮಕ್ಕಳ ಸಾಹಿತಿಗಳು ಅಶೋಕ ವಿ.ಬಳ್ಳಾ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಸಾಹಿತ್ಯದ ಪ್ರಾಯೋಗಿಕ ಕೈತೋಟದಲ್ಲಿ ಪುಟಾಣಿ ಮಕ್ಕಳು ಬಿತ್ತಿದ ಬೀಜಗಳು ಇಲ್ಲಿನ ಶಿಶುಪ್ರಾಸಗಳು ತಮ್ಮ ಭಾವವಿಸ್ತಾರದ ಸೀಮಿತ ವ್ಯಾಪ್ತಿಯಲ್ಲಿ ತೋಚಿದ್ದನ್ನು ಗೀಚಿದ್ದರೂ ಇಲ್ಲಿನ ಅಕ್ಷರದುಂಡೆಯ ಬೀಜಗಳು ಮೊಳಕೆಯೊಡೆದ ಪರಿ ನಾಳೆಯ ಸಮೃದ್ಧ ಬೆಳೆಯ ಭರವಸೆ ಮೂಡಿಸಿರುವುದು ಸುಳ್ಳಲ್ಲ. ಸಣ್ಣದೊಂದು ಬೀಜ ದೊಡ್ಡ ಮರವಾಗುವ ಪ್ರಾಕೃತಿಕ ವಿಸ್ಮಯಕ್ಕೆ ಪೂರಕವಾಗಿ ಮಣ್ಣು, ನೀರು, ಗಾಳಿ-ಬೆಳಕು, ಪಾಲನೆ-ಪೋಷಣೆ ರಕ್ಷಣೆಯ ಅಗತ್ಯವೂ ಆವಶ್ಯಕ. ಅಂತೆಯೇ ಮಕ್ಕಳ ಮುಗ್ಧ ಹೃದಯದಲ್ಲಿ ಹುದುಗಿದ ಸಾಹಿತ್ಯದ ಸುಪ್ತ ಪ್ರತಿಭೆಯ ಪ್ರಭೆ ಹೊರಜಗತ್ತಿಗೆ ಪ್ರಕಾಶಿಸಲು ಮಾಧ್ಯಮವಾಗಿ ಒಂದು ಅವಕಾಶ. ವೇದಿಕೆ, ಪ್ರೋತ್ಸಾಹವೂ ಅಪೇಕ್ಷಣೀಯ. ಇಂತಹ ಅಪೇಕ್ಷಿತ ಕಾರ್ಯಚಟುವಟಿಕೆಯ 'ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ರಾಯಚೂರು' ಇಡೀ ಕರೋನಾ ಕಾಲದ ಬಿಡುವಿನ ಸುದೀರ್ಘ ಸಮಯವನ್ನು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಮಕ್ಕಳ ಪಾಲಿಗೆ ಬರವಣಿಗೆಯ ಪ್ರಯೋಗ ಶಾಲೆಯಾಗಿಸಿದ್ದು ಸ್ತುತ್ಯಾರ್ಹವಾದುದು. ಈ ನಿಟ್ಟಿನಲ್ಲಿ ರಾಜ್ಯ/ಹೊರರಾಜ್ಯದ ಮಕ್ಕಳಿಂದ ಶಿಶುಪ್ರಾಸಗಳನ್ನು ಬರೆಸಿ 'ಪಾಟಿ ಮ್ಯಾಲ ಪಾಟಿ ನಮ್ಮ ಸಾಲಿ ಸೂಟ' ಎಂಬ ಶಿಶುಪಾಸಗಳ ಸಂಕಲನವಾಗಿ ಪ್ರಕಟಿಸುತ್ತಿರುವ ಶಂಕರದೇವರು ಹಿರೇಮಠರ ಸಾಹಸಕ್ಕೆ ಗೆಲುವಾಗಲಿ, ಮಕ್ಕಳ ಸಾಹಿತ್ಯಾಸಕ್ತಿ, ಅಭಿರುಚಿ, ಸೃಜನಶೀಲತೆ, ವೈಚಾರಿಕ ಚಿಂತನೆಯುಕ್ತ ಬರಹಗಳಿಗೆ ಈ ಕೃತಿ ಮೊದಲ ಮೆಟ್ಟಿಲಾಗಲಿ ಎಂಬ ಶುಭ ಹಾರೈಕೆಗಳು ಸಮಸ್ತ ಕನ್ನಡ ಮನಸ್ಸುಗಳದ್ದಾಗಿದೆ.
©2024 Book Brahma Private Limited.