ಕವಿ ಮಹೇಶ್ ಹೆಗಡೆ ಹಳ್ಳಿಗದ್ದೆ ಅವರ ಗಜಲ್ ಗಳ ಸಂಕಲನ-ಮಹತಿ. ವಸ್ತು ವೈವಿಧ್ಯತೆ, ನಿರೂಪಣಾ ಶೈಲಿಯಿಂದ ಓದುಗರ ಗಮನ ಸೆಳೆಯುತ್ತವೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಅವರು ಈ ಕೃತಿಗೆ ಮುನ್ನುಡಿ ಬರೆದು ‘‘ಗೊತ್ತಾಗಲೇ ಇಲ್ಲ ರದೀಫ್ ಇಟ್ಟು ಬರೆದ ಐದು ಶೇರ್ ಗಳ ಮೊದಲ ಗಝಲ್ ನ್ನು ವರ್ಣಿಸಲು ಪದಗಳಿಲ್ಲ. ತನ್ನ ಅಂತರಂಗವನ್ನೇ ಸಂಪೂರ್ಣ ತೆರೆದಿಡುವ ಪ್ರಯತ್ನ ಮಾಡಿದ್ದಾರೆ ಕವಿ. ಪ್ರೀತಿಯೆಂಬುದೊಂದು ಅಗ್ನಿ ಎನ್ನುವ ತರಹ ಬಿಂಬಿಸಿ ಅರ್ಥ-ಅನರ್ಥಗಳ ತೊಳಲಾಟವನ್ನು ಸುಂದರವಾಗಿ ರಚಿಸುವ ಪ್ರಯತ್ನ ಮಾಡಿದ್ದಾರೆ. ಕೊನೆಯಲ್ಲಿ ತನ್ನಲ್ಲಿರುವ ಕೊಳಕು ಕಾಣುವುದಕ್ಕೆ ತಡವಾಯಿತು , ಪ್ರೇಮಿಯ ಹೆಜ್ಜೆ ಗುರುತನ್ನೇ ಮುಚ್ಚುತ್ತಿದ್ದೆ, ಕಣ್ಣು ಮಂಜಾದದ್ದು ಗೊತ್ತಾಗಲೇ ಇಲ್ಲ ಎನ್ನುವ ಭಾವ ಅನನ್ಯ. ಇಡೀ ಗಝಲ್ ನಲ್ಲಿ ಕವಿಯು ಭಾವತೀವ್ರತೆಯನ್ನು ಹಿಡಿದಿಡಲು ಪಟ್ಟಿರುವ ಶ್ರಮ ಸಾರ್ಥಕ ಎನಿಸುತ್ತದೆ. ಇದು ಅವರ ಮೊದಲ ಪುಸ್ತಕ. ಬರೆಯುವ ಹವ್ಯಾಸಕ್ಕೆ ಸ್ನೇಹಿತರ ಪ್ರೋತ್ಸಾಹ ಎನ್ನುವುದು ಇಂತಹ ಒಂದು ಸಾಹಿತ್ಯಿಕ ಪುಸ್ತಕಕ್ಕೆ ಕಾರಣವಾಗಿಯೆಂದರೆ ಅತಿಶಯೋಕ್ತಿಯಲ್ಲ’ ಎಂದು ಪ್ರಶಂಸಿಸಿದ್ದಾರೆ.
ಬೆನ್ನುಡಿ ಬರೆದ ‘ಮಧುರಾ ಮೂರ್ತಿ ಅವರು ‘ಸರಳ ಮತ್ತು ಸಹಜವಾದ ಪದಗಳ ಬಳಕೆಯಿಂದ ಭಾವಾಭಿವ್ಯಕ್ತಿಯನ್ನು ತಮ್ಮ ಗಝಲ್‌ಗಳ ಮೂಲಕ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಮತ್ತು ಮನ ಮುಟ್ಟುವಂತೆ ಹೆಣೆಯುವ ಜಾಣ್ಮೆ ಹೆಗಡೆಯವರಲ್ಲಿದೆ. ಅವರ ಈ ಮಹತಿ ಸಂಕಲನದಲ್ಲಿರುವ ಗಝಲ್‌ಗಳು ಬರೀ ಪ್ರೇಮ ಕಾವ್ಯಗಳಾಗಿರದೇ, ಓದುಗರಿಗೆ ನೋವು, ನಲಿವು, ಒಲವು, ವಿರಹ, ಲೌಕಿಕ ಮತ್ತು ಆಧ್ಯಾತ್ಮಿಕ ವಿಷಯಗಳನ್ನು ಸಮಷ್ಟಿಯಾಗಿ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ ಎಂದು ಶ್ಲಾಘಿಸಿದ್ದಾರೆ.
©2024 Book Brahma Private Limited.