‘ದೀಪ ಆರುವ ಹೊತ್ತು’ ಲೇಖಕ ಆನಂದ ಭೋವಿ ಅವರ ಗಜಲ್ ಸಂಕಲನ. ಈ ಕೃತಿಗೆ ಕವಿ ಅಲ್ಲಾಗಿರಿರಾಜ್ ಕನಕಗಿರಿ ಮುನ್ನುಡಿ ಬರೆದಿದ್ದಾರೆ. ಕೃತಿ ಮತ್ತು ಕೃತಿಕಾರರ ಬಗ್ಗೆ ಬರೆಯುತ್ತಾ ‘ಇಲ್ಲಿ ಯಾರೂ ಯಾರಿಗೂ ಇಲ್ಲ. ಅವರ ಬದುಕಿನ ನೋವಿಗೆ ಅವರೇ ಮುಲಾಮು ಹಚ್ಚಿಕೊಳ್ಳಬೇಕು ಎಂದೇಳುವ ಆನಂದ ಬೋವಿ ಎಷ್ಟೊಂದು ಸೂಕ್ಷ್ಮ ಮನಸ್ಸಿನ ಕವಿ ಎಂದರೆ ಅವರೇ ಬರೆದ ಈ ಶೇರ್ ಸಾಕು. "ಉಸಿರು ಮಾರಲು ನೀನೇ ಬರಬೇಕಾಗಿರಲಿಲ್ಲ ಉಸಿರು ನೀಡಿದವರ ಕಳೆಬರವು ಉಳಿದಿಲ್ಲ" ಹುಟ್ಟು ಸಾವಿನ ನಡುವೆ ಇಲ್ಲಿ ಉಸಿರು ಮಾರಾಟವಾಗುತ್ತಿದೆ. ಸ್ವರ್ಗ ನರಕ ಎನ್ನುವ ನಾಟಕದ ನಡುವೆ ಹಲವು ರೂಪ ಅಪರೂಪದ ಜೀವ ಜೀವನ ಇಲ್ಲಿ ಬಂದು ಹೋದರು ಯಾರ ಉಸಿರಿನ ಪುರಾವೆ ಇಲ್ಲ. ಇರುವ ತನಕ ಜೀವನ ಒಂದು ರೀತಿಯ ದೊಂಬರಾಟ. ಉಸಿರು ಹೋದರೂ ಹೆಸರು ಇರುವಂತೆ ಬದುಕುವುದೇ ನಿಜವಾದ ಜೀವನ ಎಂದೇಳುವ ಕವಿ ಆನಂದ ಬೋವಿ ಅವರ ಇಂತಹ ಶೇರ್ ಮೂಲಕ ತುಂಬಾ ಇಷ್ಟ ಆಗುತ್ತಾರೆ ಹಾಗೆ ಹತ್ತಿರವೂ ಆಗುತ್ತಾರೆ. " ನಾಲ್ಕು ದಿನದ ಆಟ ಎಷ್ಟೊಂದು ಹೆಗಲ ಬದಲಾಯಿಸುವ ಸಾಲುಗಳ ಸರದಿ" ಆನಂದನು ನೊಂದಿದ್ದಾನೆ ನಂಬಿಕೆಗಳ ಮೇಲೆ ದಾರಿ ಕಟ್ಟುತ್ತಿರುವಿರಿ" ಆರು ಮೂರರ ಬಾಗಿಲು ತೆರೆದುಕೊಂಡು ಹೊರಟ ಈ ಜೀವ ಜೀವನ ಕೇವಲ ನಾಲ್ಕು ದಿನದ ಆಟ ಇದ್ದಂತೆ. ಒಂದು ದಿನ ಉಸಿರು ನಿಲ್ಲಿಸಲು ಎಷ್ಟೊಂದು ದಿನಗಳ ಕಾಲ ಕಾಯಬೇಕು. ಹೌದು ಕಾಯುವ ಕಾಲುದಾರಿಯಲ್ಲಿ ಸಾಗುವ ದಿನದ ಬದುಕಿನ ಕೊನೆ ಸತ್ಯವೇ ಹೆಗಲು ಬದಲಿಸುವ ಹೆಣದ ಮೆರವಣಿಗೆ. ಎನ್ನುವುದು ಯಾರೂ ಮರೆಯುವಂತಿಲ್ಲ ಎಂದೇಳಿದ ಆನಂದ ಬೋವಿ ಜೀವನದ ಕೆಲವು ಮಾರ್ಮಿಕವಾದ ಸತ್ಯವನ್ನು ಗಜಲ್ ಶೇರ್ ನಲ್ಲಿ ಹಂಚಿಕೊಂಡ ಗಂಭೀರ ಚಿಂತನೆಯೂ ಹೌದು’ ಎನ್ನುತ್ತಾರೆ ಅಲ್ಲ ಅಲ್ಲಾಗಿರಿರಾಜ್ ಕನಕಗಿರಿ. ಈ ಸಂಕಲನದಲ್ಲಿ ಅತ್ಯಂತ ಸೂಕ್ಷ್ಮವಿಚಾರಗಳನ್ನು ಸೃಜನಶೀಲತೆಯಲ್ಲಿ ಕಟ್ಟಿದ ಅರ್ಥಪೂರ್ಣ ಗಜಲ್ ಗಳು ಸಂಕಲನಗೊಂಡಿವೆ.
©2024 Book Brahma Private Limited.