ರಾಯಚೂರು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ ಪ್ರಕಟಿಸಲಾದ ಗಜಲ್ ಗಳ ಸಂಕಲನ ಮತ್ತು ಗಜಲ್ ಕುರಿತಾದ ಬರಹಗಳನ್ನು ಈ ಗ್ರಂಥದಲ್ಲಿ ಸಂಕಲಿಸಲಾಗಿದೆ. ಪುಸ್ತಕವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆ ಭಾಗದಲ್ಲಿ ಲೇಖನಗಳಿವೆ. ಶಾಂತರಸ, ನಟರಾಜ ಬೂದಾಳು, ಜಂಬಣ್ಣ ಅಮರಚಿಂತ, ಡಿ.ಆರ್. ನಾಗರಾಜ, ಫಕೀರ ಮುಹಮ್ಮದ್ ಕಟ್ಪಾಡಿ, ಚಿದಾನಂದ ಸಾಲಿ ಅವರು ಗಜಲ್ ಗಳ ಸ್ವರೂಪ, ವಿಕಾಸ, ಗ್ರಹಿಕೆಗಳ ಕುರಿತು ಬರೆದಿರುವ ಲೇಖನಗಳನ್ನು ನೀಡಲಾಗಿದೆ. ಗಜಲ್ ಗಳಿಗೆ ಇದೊಂದು ಉತ್ತಮ ಪ್ರವೇಶಿಕೆ. ಹಾಗೆಯೇ ಗಜಲ್ ಬಗ್ಗೆ ಅಧ್ಯಯನ ನಡೆಸುವವರಿಗೆ ಇದೊಂದು ಮಹತ್ವಪೂರ್ಣ ಆಕರ ಒದಗಿಸುತ್ತದೆ. ಎರಡನೆಯ ಭಾಗದಲ್ಲಿ ಸೊಗಸಾದ, ಓದಿನ ಸುಖಕ್ಕೆ ತೆರೆದುಕೊಳ್ಳುವ ಗಜಲ್ ಗಳಿವೆ. ವಿವಿಧ ಕವಿಗಳು ಬರೆದಿರುವ 26 ಕವಿಗಳ 52 ಗಜಲ್ ಗಳನ್ನು ಸಂಕಲಿಸಲಾಗಿದೆ. ಇದು ರಾಯಚೂರು ಜಿಲ್ಲೆಯ ಕವಿಗಳ ಗಜಲ್ ಗಳನ್ನು ಒಳಗೊಂಡಿದೆ. ಒಂದು ಜಿಲ್ಲೆಯ ಒಂದು ಸಾಹಿತ್ಯ ಪ್ರಕಾರಕ್ಕೆ ಸೇರಿದ ಇಷ್ಟೊಂದು ಜನ ಕವಿಗಳು ಇರುವುದು ಸೋಜಿಗ ಮತ್ತು ಖುಷಿಯ ಸಂಗತಿ. ಕೇವಲ ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲದೆ ಗುಣಮಟ್ಟದ ದೃಷ್ಟಿಯಿಂದಲೂ ಕನ್ನಡದ ಅತ್ಯುತ್ತಮ ಗಜಲ್ ಗಳನ್ನು ಈ ಸಂಕಲನದಲ್ಲಿ ನೋಡಬಹುದು. ನಿಜವಾದ ಅರ್ಥದಲ್ಲಿ ಇದೊಂದು ಪ್ರಾತಿನಿಧಿಕ ಸಂಕಲನ, ಅದು ಕೇವಲ ರಾಯಚೂರು ಜಿಲ್ಲೆಗೆ ಮಾತ್ರ ಸೀಮಿತ ಎಂದು ಭಾವಿಸಬೇಕಿಲ್ಲ. ಪ್ರಾದೇಶಿಕತೆಯ ಗಡಿಯನ್ನೂ ಮೀರಿದ ಗಜಲ್ ಗಳು ಈ ಸಂಕಲನದಲ್ಲಿವೆ. ಗಜಲ್ ಪ್ರಿಯರಿಗೆ ರಸದೌತಣ ನೀಡುವುದರಲ್ಲಿ ಅನುಮಾನವಿಲ್ಲ.
©2024 Book Brahma Private Limited.