‘ರಾಗವಿಲ್ಲದಿದ್ದರೂ ಸರಿ’ ಕವಿ ಉಮರ್ ದೇವರಮನಿ ಅವರ ಚೊಚ್ಚಲ ಕವನ ಸಂಕಲನ. ಈ ಕೃತಿಗೆ ಕವಯತ್ರಿ, ವಿಮರ್ಶಕಿ ಮೆಹಬೂಬ್ ಬೀ. ಶೇಖ್ ಮುನ್ನುಡಿ ಬರೆದಿದ್ದಾರೆ. ‘ಈ ಸಂಕಲನದಲ್ಲಿ ಅತಿ ಮುಖ್ಯವಾಗಿ ಗಮನಿಸಿದ ಅಂಶವೆಂದರೆ, ಬಹುತೇಕ ಗಜ಼ಲ್‌ಗಳು ಸಾಮಾಜಿಕ ದೃಷ್ಟಿಕೋನವುಳ್ಳವು. ವೈಯಕ್ತಿಕ ದುಃಖ ಸಮಾಜದ ದುಃಖವಾಗುವ, ಸಮಾಜದ ದುಃಖ ವೈಯಕ್ತಿಕ ದುಃಖವಾಗುವ ಬೆಳವಣಿಗೆಯ ಶೋಧನೆ ಈ ಗಜ಼ಲ್ ಸಂಕಲನದ ವಿಶೇಷತೆ’ ಎನ್ನುತ್ತಾರೆ ಮೆಹಬೂಬ್ ಬೀ ಶೇಖ್ ಜೊತೆಗೆ ಸಮಾಜವನ್ನು ತೆರೆದ ಕಣ್ಣಿನಿಂದ ನೋಡುವ, ಅನುಭವಿಸಿ ಅನುಭಾವ ಇಳಿಸುವ ಕಲೆ ಉಮರ್ ಅವರಿಗೆ ಸಿದ್ದಿಸಿದೆ. ಭಾವಗಳ ಸಂಯೋಜನೆಯನ್ನು ಕಲಾತ್ಮಕ ಹಾಗೂ ಲಯಾತ್ಮಕವಾಗಿಸಿದ್ದಾರೆ. ಪ್ರತಿ ಸಂಕೇತ, ಪ್ರತೀಕಗಳನ್ನು ಅರಿಯುವ ವಿಧಾನವಾಗಿದ್ದು ಅದನ್ನು ಒಂದು ಅನುಭಾವದ ವಿನ್ಯಾಸವಾಗಿಸಿದ್ದಾರೆ. ಸರಳ, ಅಮೂರ್ತ, ವಿರಳ, ಸಂಯೋಜಿತ, ಸಂಕೀರ್ಣ ಪ್ರತಿಮೆಗಳು ತನ್ಮಯತೆ, ತಲ್ಲೀನತೆಯಿಂದ ಅರ್ಥವೈಭವ ಸ್ಪುರಿಸಿ ಆತ್ಮಶುದ್ಧಿಗೆ ಕಾರಣವಾಗಿವೆ. ಶಬ್ದಗಳ ನಡುವಿನ ಯೋಗ್ಯತೆ, ಅವಕಾಶ, ಸಮರ್ಪಕ ಜೋಡಣೆ, ಆಕಾಂಕ್ಷೆ ಇವುಗಳ ಅಂತರ ಸಂಬಂಧ ಅನುಕರಣನೀಯ ಎಂಬುದು ಅವರ ಅಭಿಪ್ರಾಯ. ಸಮಾಜದ ಕುರೂಪಗಳ ಚಿತ್ರಣ, ಹೊಸತು ಅಭಿವ್ಯಕ್ತಿ, ನವೀನ ಶೈಲಿಯ ರೂಪಕಗಳು ವಸ್ತುವಿನ ಗಟ್ಟಿತನವನ್ನು, ಮೌಲಿಕತೆಯನ್ನು ಹೆಚ್ಚಿಸುತ್ತವದಲ್ಲದೆ, ಉದಯೋನ್ಮಖ ಗಜ಼ಲ್‌ಕಾರರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಒಂದು ವಿಶಿಷ್ಟಸ್ಥಾನ ಒದಗಿಸಿಕೊಡುತ್ತವೆ. ವಿಚಾರಗಳಲ್ಲಿ ಸ್ಪಷ್ಟತೆ, ಭಾಷೆ, ಶೈಲಿ ಗಜ಼ಲ್‌ನಲ್ಲಿ ನಿರ್ಣಾಯಕ ತೌಲನಿಕ ಸಂಗತಿಯಾಗುತ್ತವೆ.
©2025 Book Brahma Private Limited.