ಲೇಖಕ, ಕವಿ ಸಿದ್ಧರಾಮ ಹೊನ್ಕಲ್ ಅವರ ‘ಆತ್ಮಸಖಿಯ ಧ್ಯಾನದಲಿ’ ಎಂಬುದು ಗಜಲ್ ಕಾವ್ಯ ಸಂಕಲನ. 85 ಗಜಲ್ ಗಳು ಸಂಕಲನದಲ್ಲಿವೆ. ಸಾಹಿತಿ ಬಸವರಾಜ ಸಬರದ, ಯುವ ಗಜಲ್ ಸಾಧಕ ನೂರ ಅಹಮ್ಮದ್ ನಾಗನೂರ, ಗಜಲ್ ಕವಿ ಸಿರಾಜ್ ಅಹ್ಮದ್ ಸೊರಬ, ಹಿರಿಯ ಗಜಲ್ ಲೇಖಕಿ ಪ್ರಭಾವತಿ ಎಸ್ ದೇಸಾಯಿ, ಸಾಹಿತಿ ಅಬ್ದುಲ್ ಹಲ್ ತೋರಣಗಲ್ಲು ಸೇರಿದಂತೆ ನಾಡಿನ ಗಣ್ಯರು ಈ ಕವನ ಸಂಕಲನದಲ್ಲಿ ಬರಹಗಳನ್ನು ನೀಡಿದ್ದಾರೆ. ಈ ಕಾವ್ಯ ಸಂಕಲನಕ್ಕೆ ಬಹುಭಾಷಾ ಕವಿ ಕಾಶೀನಾಥ ಅಂಬಲಗಿ ಅವರು ಮುನ್ನುಡಿ ಬರೆದು ‘ವಿಷಯ ವೈವಿಧ್ಯತೆ, ಗಜಲ್ ಛಂದಸ್ಸಿನ ತನ್ಮಯತೆ, ವ್ಯಕ್ತಿ ಮುಖಿ, ಸಮಾಜಮುಖಿ ದೃಷ್ಟಿ, ಪ್ರೀತಿ ಪ್ರೇಮ ಕೇಂದ್ರಿತ ಸೆಳೆತ, ಭಾಷೆಯ ಸಹಜ ನಡೆಯಿಂದ ಸಿದ್ದರಾಮ ಹೊನ್ಕಲ್ ಅವರ ‘ಆತ್ಮಸಖಿಯ ಧ್ಯಾನದಲಿ’ ಗಜಲ್ ಸಂಕಲನವು ಕೋಮಲ ನವಿಲುಗರಿಯ ನವರಂಗೀ ಬಣ್ಣ, ಕೊಳಲ ನಾದ, ಸಾಕಾರ ನಿರಾಕಾರ ಚೆಲುವಿನಿಂದ ನವಿಲು ನಾಟ್ಯ ನಟಿಸಿದಂತಿದೆ’ ಎಂದು ಪ್ರಶಂಸಿಸಿದ್ದಾರೆ. ಸದಾ ಹೊಸತನಕ್ಕೆ ತುಡಿಯುವ, ಹೊಸದನ್ನು ಕಲಿಯುವ ಹೊಸತನಕ್ಕೆ ಹಾತೊರೆಯುವ ಹೊನ್ಕಲ್ ಅವರು ಸದಾ ಗೆಲ್ಲುತ್ತಿರುತ್ತಾರೆ. ಈ ಗಜಲ್ ಸಂಕಲನದ ಮೂಲಕ ಮತ್ತೊಮ್ಮೆ ಗೆಲುವಿಗಾಗಿ ಶುಭ ಹಾರೈಸುವುದಾಗಿ ಗಜಲ್ ಸಾಧಕಿ ಶ್ರೀದೇವಿ ಕೆರೆಮನೆ ಅವರು ಸಂಕಲನದ ಮೊದಲ ಪುಟಗಳಲ್ಲಿ ಬರೆದಿದ್ದಾರೆ.
©2024 Book Brahma Private Limited.