‘ಒಡಲು ಉರಿದಾಗ’ ಶಿವಶಂಕರ ಕಡದಿನ್ನಿ ಅವರ ಸಂಕಲನವಾಗಿದೆ. ಈ ಸಂಕಲನದಲ್ಲಿ ದಲಿತ ಮತ್ತು ಬಂಡಾಯ ಕಾವ್ಯ ಸಂವೇದನೆಯನ್ನು ಗಜಲ್ ಛಂದಸ್ಸಿಗೆ ಕಸಿ ಮಾಡಲು ಇಲ್ಲಿ ಅವರು ಯತ್ನಿಸಿದ್ದಾರೆ. ಸಮಕಾಲೀನ ಸಂದರ್ಭದ ಬಡತನ, ಹಸಿವು, ಶೋಷಣೆ, ಭ್ರಷ್ಟಾಚಾರ ಮತ್ತು ವಂಚನೆಯ ನಡುವೆ ಪರಿಶುದ್ಧ ಪ್ರೀತಿಗಾಗಿ, ಮಾನವೀಯ ಅಂತಕರಣಕ್ಕಾಗಿ ಅವರು ಹಾತೊರೆದಿದ್ದಾರೆ. ಮಡುಗಟ್ಟಿದ ವಿಷಾದವೇ ಇಲ್ಲಿನ ಸ್ವಾಭಾವವಾಗಿ ಓದುಗರ ಮನಸ್ಸನ್ನು ಕಲಕುತ್ತದೆ. ಗಜಲ್ ಗಳಲ್ಲಿ ಸಾಮಾನ್ಯವಾಗಿ ಸಿಗುವ ಪ್ರೇಮ, ವಿರಹಗಳ, ವಸ್ತುವನ್ನು ಒಳಗೊಂಡು, ಅದನ್ನು ಮೀರಿದ ಸಾಮಾಜಿಕ ವಿಸ್ತಾರವೊಂದನ್ನು ಇವರ ಗಜಲ್ ಗಳಲ್ಲಿ ಕಾಣಬಹುದು. " ಜಾತಿ ಮತಗಳನ್ನು ತೊರೆದು ಕಾಯುತ್ತಿರುವೆ ಹಿಡಿಯಷ್ಟು ಪ್ರೀತಿಗಾಗಿ" ಎಂದು ಹಂಬಲಿಸುವ ಕವಿಯು "ವಿರಹದ ಜ್ವಾಲೆ ಎದೆಯಲ್ಲಿ ಉರಿಯುತ್ತಿದೆ ಹೇಗೆ ತಾಳಲಿ ಎಂದು ಪರಿತಪಿಸುತ್ತಾರೆ." "ಸಂಬಂಧದ ಎಲೆಯೂ ಕೊಂಬೆಯಿಂದ ಜಾರುತಿದೆ ಈ ದಿನ! ಚಿಗುರಿದ ಸಸಿಯೂ ಬಾಡಿ ಮಣ್ಣಲ್ಲಿ ಮೌನದಿ ಮಲಗುತ್ತಿದೆ ಈ ದಿನವೆಂಬ ಒಂಟಿತನದ ರೂಪಕ ರಚನೆಯನ್ನು ಕವಿ ಕಟ್ಟಿದ್ದಾರೆ. ಆದರೆ ಶಿವಶಂಕರ ಕಡದಿನ್ನಿಯವರ ಅಭಿವ್ಯಕ್ತಿಯ ಹಂಬಲ ಇಲ್ಲಿಗೇ ನಿಲ್ಲುವುದಿಲ್ಲ. ವೈಯಕ್ತಿಕತೆಯನ್ನು ದಾಟಿದ ಸಾಮಾಜಿಕತೆ ಹರಳುಗಟ್ಟುತ್ತದೆ. ಸಮಾಜದಲ್ಲಿ ಕಾಡುವ ಸಮಸ್ಯೆಗಳನ್ನು ಮನದುರಿಯಾಗಿಸಿಕೊಂಡ ಸಂಕಟದ ಸಾಲುಗಳು ಹೊರಬರುತ್ತವೆ:
"ಹಸಿದ ಒಡಲ ಅಂಗಳದಲ್ಲಿ ವಿಷದ ಬೀಜಗಳ ಬಿತ್ತಿದ್ದು ಸಾಕು! ಚಿಗುರಿ ತೆನೆಯೊಡೆದ ಪೈರಿಗೆ ಕುಡುಗೋಲು ಬೀಸಿದ್ದು ಸಾಕು! ಎಂದು ನೋವ ನುಡಿಯಾಗುವ ರಚನೆಗಳು ಮೂಡಿ ಬರುತ್ತವೆ. "ಧೂಳು ಹಿಡಿದು ಜಡ್ಡಿನಿಂದ ತತ್ತರಿಸಿ ನೆಲ ಕೊರಗಿದೆ! ಎದೆ ಒಡೆದು ಬೆಂಕಿ ಹೊತ್ತಿದೆ ಆರಿಸಲು ಬನ್ನಿ" "ಹಸಿದ ಒಡಲಿಗೆ ಉರಿ ಹಚ್ಚಿದವರು ಯಾರೆಂದು ಹೇಳಲಿ! ಹಾರುವ ಹಕ್ಕಿಯ ಪುಕ್ಕ ಕಿತ್ತಿದವರು ಯಾರೆಂದು ಹೇಳಲಿ?" ಎಂಬ ಪ್ರಶ್ನೆಯಲ್ಲೇ ಅಮಾನವೀಯ ಸನ್ನಿವೇಶಕ್ಕೆ ಪ್ರತಿಕ್ರಿಯಿಸುತ್ತಾರೆ. ಅಸಮಾನತೆಯಿಲ್ಲಿದ ಅನ್ಯೋನ್ಯತೆಯನ್ನು ಬಯಸುತ್ತಾರೆ. ಈ ನೆಲೆಯಲ್ಲೇ "ಬೆಂದು ಬಳಲಿ ಉದರಿದ ಎಲೆಗಳನ್ನು ಪ್ರೀತಿಸುವೆ ನಾನು! ಹಸಿದ ಒಡಲೊಳಗೆ ನೋವು ನುಂಗಿದವರನ್ನು ಪ್ರೀತಿಸುವೆ ನಾನು! ಎಂದು ಅಂತಃಕರಣದ ಅಭಿವ್ಯಕ್ತಿಯಾಗುತ್ತಾರೆ. ಅಧಿಕಾರಶಾಹಿ ನಿರ್ಮಿಸಿದ ಅಸಮಾನತೆ ಮತ್ತು ಅಮಾನವೀಯತೆಗಳಿಗೆ ಬೇಸತ್ತು "ಅಧಿಕಾರದ ಅಮಲೇರಿದವರಿಗೆ ಬ್ಯಾನೆ ಬರುವುದನ್ನು ನಾನು ನೋಡಬೇಕು! ಉಗುರು ಕತ್ತರಿಸಿ ಉಗುಳುವವರಿಗೆ ಬ್ಯಾನೆ ಬರುವುದನ್ನು ನಾನು ನೋಡಬೇಕು! ಎಂದು ಆಶಿಸುತ್ತಾರೆ. ಶಿವಶಂಕರ ಕಡದಿನ್ನಿ ಅವರ ಗಜಲ್ ಗಳಲ್ಲಿ ನೆತ್ತರುಕ್ಕದ ಗಾಯಗಳಿವೆ; ಮಾಯದ ಈ ಗಾಯಗಳು ಒಳ ಸುಡುವ ಸಂಕಟಗಳಾಗಿ ಅಕ್ಷರಾಭಿವ್ಯಕ್ತಿ ಪಡೆಯುತ್ತವೆ. ವಾಚ್ಯವಾಗದ ರೂಪಗಳಲ್ಲಿ ಧ್ವನಿಸುವ ಅಭಿವ್ಯಕ್ತಿ ಶಕ್ತಿ, ಶಿವಶಂಕರ ಕಡದಿನ್ನಿ ಅವರಿಗೆ, ಇದೊಂದು ಮಾನವೀಯ ಹಾಗೂ ಗಮನೀಯ ಗಜಲ್ ಸಂಕಲನವಾಗಿದೆ ಎಂದು ಬರಗೂರು ರಾಮಚಂದ್ರಪ್ಪ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.