ಲೇಖಕ ಮಹಿಪಾಲರೆಡ್ಡಿ ಮುನ್ನೂರು ಅವರ ಪ್ರಧಾನ ಸಂಪಾದಕತ್ವದ, ಎಸ್. ರಂಗಸ್ವಾಮಿ ಅವರ ಗೌರವ ಸಂಪಾದಕತ್ವದ ಹಾಗೂ ಪ್ರೇಮಾ ಹೂಗಾರ ಮತ್ತು ನಂರುಶಿ ಕಡೂರು. ಅವರ ಸಂಪಾದಕತ್ವದ ಗಜಲ್ ಗಳ ಸಂಕಲನ-ಗಜಲ್ ಸಂಭ್ರಮ. ಸಂಕಲನದಲ್ಲಿ 180 ಗಜಲ್ ಕವಿಗಳ 180 ಗಜಲ್ ಗಳಿವೆ. ರಾಜ್ಯಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಕೃತಿಗೆ ಬೆನ್ನುಡಿ ಬರೆದ ಕವಯತ್ರಿ ಪ್ರೇಮಾ ಹೂಗಾರ ‘ಕಲ್ಯಾಣ ಕರ್ನಾಟಕ ಭಾಗಕ್ಕೆ ಗಜಲ್ ಎಂಬ ಹೊಸ ಪ್ರಕಾರವನ್ನು ಪರಿಚಯಿಸಿದ ಗಜಲ್ ಕಾರರರಾದ ಡಾ. ಶಾಂತರಸ ಹೆಂಬೆರಾಳು ಅವರನ್ನು ಸ್ಮರಿಸುತ್ತೇನೆ. ಕಾಲಾನುಕಾಲದಿಂದ ಮನದ ಮಾತನ್ನು ಕವಿತೆ ಎಂಬ ಸಾಧನೆಯಿಂದ ಹೊರಹಾಕಿದ ಕವಿಗಳು, ಅದೇ ಮನದ ಮೌನವನ್ನು ಗಜಲ್ ನ ಮೂಲಕ ಮೌನಿಯಾದ ಮನಸುಗಳಿಗೆ, ಮಾತಾದರು. ದನಿಯಾದರು. ಸುಮಾರು ಒಂದು ದಶಕದ ಸತತ ಪ್ರಯತ್ನದಿಂದ ಎಲ್ಲ ಗಜಲ್ ಮನಸುಗಳನ್ನು ಒಂದುಗೂಡಿಸಿ, ಅವರ ಗಜಲ್ ಗಳನ್ನು ಸಂಗ್ರಹಿಸಿ, ಗಜಲ್ ಸಂಭ್ರಮ ಎಂಬ ರಾಜ್ಯಮಟ್ಟದ ಪ್ರಾತಿನಿಧಿಕ ಸಂಕಲನ ಪ್ರಕಟವಾಗಿದೆ. ಇಲ್ಲಿ ಕವಿಗಳ ವಯಸ್ಸಿನ ನಿರ್ಬಂಧವಿಲ್ಲ. ಗಜಲ್ ಕೃತಿ ಹೊರತಂದ-ತಾರದ ಗಜಲ್ ಕಾರರೂ ಇಲ್ಲಿದ್ದಾರೆ. ಪ್ರಾದೇಶಿಕವಾಗಿ ಯಾವುದೇ ಚೌಕಟ್ಟಿನ ಮಿತಿ ಇಲ್ಲ. ಕರ್ನಾಟಕದ ಮೂಲೆಮೂಲೆಯಿಂದ ಬಂದ ಗಜಲ್ ಗಳನ್ನು ಇಲ್ಲಿ ಮುಕ್ತವಾಗಿ ಬಳಸಿಕೊಳ್ಳಲಾಗಿದೆ. ಒಂದುಕಾಲಕ್ಕೆ ಮದಿರೆ-ಮಾನಿನಿಗೆ ಮೀಸಲಿದ್ದ ಗಜಲ್ ನ ಸಾಕಿಯ ಕನಸುಗಳು, ಕನವರಿಕೆಗಳೂ ಬದಲಾಗಿವೆ. ಮದಿರೆಯೂ ತುಸು ನಶೆ ಹೀನವಾಗಿದೆ. ಗಜಲ್ ಕೇವಲ ಚೆಲುವಿನ ವರ್ಣನೆಯಲ್ಲ;ಬಡತನ ಅಂಗಳದ ಮಲ್ಲಿಗೆಯೂ ಆಗಬಹುದು ಎಂದು ಈ ‘ಗಜಲ್ ಸಂಭ್ರಮ’ದ ಒಳಗಣ ಅನೇಕ ಗಜಲ್ ಗಳು ಈ ವಿಷಯವನ್ನು ತಿಳಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.