’ಕನ್ನಡಿ ಮುಂದಿನ ನಗ್ನ ಚಿತ್ರಗಳು’ ಪ್ರಶಾಂತ ಅಂಗಡಿ ಅವರ ಗಜಲ್ ಕೃತಿ. ಇಲ್ಲಿನ ಬರಹವು ಭಾವನಾ ಅಲೆಗಳಾದ ಗುಣ, ವೇಗ, ಉದ್ರೇಕ, ಪ್ರೀತಿಯ ಅಂಗಲಾಚನೆ ಬದುಕಿನ ರಹಸ್ಯವನ್ನು ಬಿಚ್ಚುತ್ತದೆ. ಓದುವ ಮನಸ್ಸಿನಲ್ಲಿ ಮೃದುವಾಗಿ, ಹಿತವಾಗಿ, ಹದವಾಗಿ, ಹುಲುಸಾಗಿ ಜೀವನದ ಜರೂರತ್ತನ್ನು ತೋರಿಸುತ್ತದೆ ಈ ಗಜಲ್ ಗಳು. ಕವಿಯ ಕಾವ್ಯಾಂತರಂಗದಲ್ಲಿ ಆಯಸ್ಕಾಂತೀಯ ಗುಣವಿರುವುದು ಇಲ್ಲಿ ಸಾಬೀತಾಗುತ್ತದೆ. ಮನುಷ್ಯತ್ವ ಲಕ್ಷಣಗಳನ್ನು ಹೊತ್ತು, ಘನದಿಂದ ಶಾಂತ ತತ್ವಗಳನ್ನು ಮೈಗೂಡಿಸಿಕೊಂಡಿರುವ ಕಾವ್ಯಕ್ಕೆ ಕಬ್ಬಿಣವನ್ನು ಕರಗಿಸುವ ತಾಕತ್ತಿದೆ ಎಂಬುದನ್ನು ತಿಳಿಸುವಂತಿದೆ. ಈ ಹೊತ್ತಿಗೆಯು ಗಜಲ್ ಬಾದಶಾಹ್ ಗಾಲೀಬನ ಮಧುಶಾಲೆಯ ಮೂಲೆಯಲ್ಲಿ ಕಾವ್ಯದ ಮಧುವನ್ನು ಹೀರುತಾ ಸಾಕಿಯ ಜೊತೆಗೆ ತನ್ನ ಮೌನವನ್ನ ಮುರಿದು ಪ್ರೇಮ, ವಿರಹ, ವಿರಸ ಹಸಿವು, ತಾಯಿಯ ತ್ಯಾಗ, ಗುರುವಿನ ನೆನಪು ಸಮಾಜದಲ್ಲಿಯ ಕೋಮು ಮತೀಯವಾದದಲ್ಲಿ ಬೆಂದು ನರಳುತ್ತಿರುವ ಬದುಕುಗಳ ಆರ್ತನಾದವನ್ನ ಹಿಡಿದಿಡಲು ಯತ್ನಿಸುವ ಅಕ್ರೋಶಭರಿತವಾದ ಧ್ವನಿಯಾಗಿದೆ. ಕೋಮಲವಾದ ಹೂವಂತೆ ಪ್ರೇಮದ ಗಜಲ್ ಗಳು, ಧರ್ಮ, ಜಾತಿ, ದೇವರು, ಮೇಲು, ಕೀಳು ಸೇರಿದಂತೆ ಈ ಸಮಾಜದ ಹಲವಾರು ವಿಚಾರಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತದೆ.
©2025 Book Brahma Private Limited.