ಸುರೇಶ್ ರಾಜಮಾನೆ ಅವರ ಗಜಲ್ ಸಂಕಲನ ಕತ್ತಲ ಗರ್ಭದ ಬೆಳಕು. ಈ ಸಂಕಲನದಲ್ಲಿ ಗಂಗಾವತಿಯ ಸಾಹಿತಿಗಳಾದ ರಮೇಶ ಗಬ್ಬೂರು ಅವರು ಮುನ್ನುಡಿ ಬರೆದಿದ್ದ್ದಾದು, ಸಾಹಿತಿ ರಾಜಶೇಖರ ಮಠಪತಿ ಅವರು ಬೆನ್ನುಡಿ ಬರೆದಿದ್ದಾರೆ.
ಆರೋಗ್ಯಕರ ಸಮಾಜ ಕಟ್ಟುವ ನಿಟ್ಟಿನಲ್ಲಿ ತಮ್ಮ ಬರಹಗಳ ಮೂಲಕ ಶಾಂತಿಯಿಂದ ಸದ್ದಿಲ್ಲದೆ ಬರೆಯುವ ಒಂದು ವರ್ಗವೂ ಕೂಡ ಇದೆ. ಅಂತ ವರ್ಗಕ್ಕೆ ಸೇರಿರುವ ಕವಿಗಳು ತಮ್ಮ ಬರಹದ ಬದ್ಧತೆಯನ್ನು ಪ್ರದರ್ಶಿಸುತ್ತಾ ಪ್ರಶಸ್ತಿಗಳ ಹಿಂದೆ ಬೀಳದೆ, ವಾದ-ವಿವಾದಗಳ ಹಿಂದೆ ಬೀಳದೆ ಸಂತೋಷಕ್ಕಾಗಿ ಮತ್ತು ಸಮಾಜದ ಒಳಿತಿಗಾಗಿ ಬರೆಯುವ ಒಂದು ಪಡೆಯೇ ಇದೆ. ಹಾಗೆ ಬರೆಯುವ ಒಬ್ಬ ಕವಿಯಾಗಿ, ಸಮಸಮಾಜದ ಕನಸಿಗಾಗಿ ಬರೆಯುವ ಕವಿಯೂ ಆಗಿ ನಮಗೆ ಸುರೇಶ್ ಎಲ್ ರಾಜಮಾನೆ ಕಾಣಿಸಿಕೊಳ್ಳುತ್ತಾರೆ...
ಗಜಲ್ ಕಟ್ಟುವಾಗ ಭಿನ್ನ ವಿಷಯಗಳನ್ನು ಮತ್ಲಾಗಳಲ್ಲಿ ಶೇರ್ ಗಳಲ್ಲಿ ತಂದು ಕಾವ್ಯದ ವಿಸ್ತಾರವನ್ನು ತೋರಿಸುವಲ್ಲಿ ಜಾಣ ಹೆಜ್ಜೆಯನ್ನು ಇಟ್ಟಿದ್ದಾರೆ. ಬಹಳಷ್ಟು ಕವಿಗಳು ಗಜಲ್ ಎಂದಕೂಡಲೇ ಶೇರ್‌ಗಳ ಒಳಗೆ ಒತ್ತಾಯಪೂರ್ವಕವಾಗಿ ತುರುಕುವ ಕೆಲವು ಅನ್ಯಭಾಷಿಕ ಪದ ಪ್ರಯೋಗಗಳಿಗೆ ಎಡೆ ಮಾಡಿಕೊಡದೆ ಸ್ಪಷ್ಟ ದೇಶೀಯ ಭಾಷೆಯಲ್ಲಿ ಬಹಳ ಸರಳವಾಗಿ ಗಜಲ್‌ನ್ನು ಹೆಣೆಯುತ್ತ ಬರೆದಿದ್ದಾರೆ. ಗಜಲ್ ತಲೆಮಾರನ್ನು ವೀಕ್ಷಿಸಿದಾಗ ಗಜಲ್ ಗಳಿಗೆ ಶೀರ್ಷಿಕೆ ಕೊಡಬೇಕು ಬೇಡವೋ, ಕೊಟ್ಟರೆ ಏನಾದೀತು ಕೊಡದಿದ್ದರೆ ಏನಾದೀತು ಎಂಬ ಚರ್ಚೆ ಇದೆ. ಅದ್ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳದೆ ಮೊದಲ ಗಜಲ್ ಸಂಕಲನ “ಕತ್ತಲ ಗರ್ಭದ ಬೆಳಕು” ಸಂಕಲನದೊಳಗೆ ಮತ್ಲಾಗಳು ಆರಂಭವಾಗುವ ಮುಂಚೆ ಶೀರ್ಷಿಕೆಗಳನ್ನು ಇಟ್ಟು ನಾನು ಏನನ್ನೂ ಬರೆಯಲು ಹೊರಟಿರುವೆ ಎಂದು ಓದುಗನಿಗೆ ತಿಳಿಸುತ್ತಾ ಓದನ್ನು ಸರಳೀಕರಿಸಿದ್ದಾರೆ. ಯಾವುದೇ ಓದು ಸರಳವಾಗಿರಬೇಕು, ಸಾಮಾನ್ಯರಿಗೆ ತಿಳಿಯುವಂತೆ ಇರಬೇಕು ಎಂಬ ಕಾರಣದಿಂದಾಗಿ ಸುರೇಶ್ ಎಲ್ ರಾಜಮಾನೆಯವರು ಬಿಸಿಲು ನಾಡಿನಲ್ಲಿ ತಮ್ಮದೇ ರಾಜಮಾರ್ಗವನ್ನು ಹಾಕಿಕೊಂಡಿದ್ದಾರೆ.
©2024 Book Brahma Private Limited.