'ಗಜಲ್ ಗುಲ್ಮೋಹರ್' ಮಲ್ಲಿನಾಥ್ ಎಸ್. ತಳವಾರ ಅವರ ಗಜಲ್ ಸಂಕಲನವಾಗಿದೆ. ಚಿಂತನೆ-ಕಲ್ಪನೆಗಳಿಗೆ ಮೆಟ್ಟಿಲುಗಳಾಗಿ ಆಕಾಶ ಏರಿ, ಪಾತಾಳಕ್ಕಿಳಿದು, ರೆಕ್ಕೆಗಳಾಗಿ ಭಾವದ ನಿಗೂಢ ದಿಗಂತಗಳನ್ನು ಮುಟ್ಟಿ ತಟ್ಟಿ, ಸ್ವರಗಳಾಗಿ ಹೃದಯ ತಂತಿಯ ಮೀಟಿ, ಸಾರ್ಥಕ ಭಾವದ ಬದುಕಿನಂತೆ, ಮನದ ತುಂಬಾ ಮಲ್ಲಿಗೆ, ಗುಲಾಬಿ, ಸಂಪಿಗೆ ಪರಿಮಳದ ಸಿಂಚನ ಮಾಡುತ್ತವೆ. ತಂಗಾಳಿಗೆ ನವಿರಾಗಿ ಬಳುಕಾಡುವ ಬಳ್ಳಿಯಂತೆ; ಅದು ಮಾತಿಗೆ ಸಿಗದ ಪುಳಕ; ಈ ಕೃತಿಯಲ್ಲಿ ಹೆಪ್ಪುಗಟ್ಟಿದೆ. ಚಿಂತನೆ ಚೆಲ್ಲುವರಿದಿದೆ. 'ಅಂಕಣ' ಅಂಗಳದಲ್ಲಿ ಸಾಹಿತ್ಯ ಸಮೃದ್ಧವಾಗಿದೆ. ಗಜಲ್ ಸಾಮ್ರಾಟರ ಸಾಲುಗಳಲ್ಲಿ ಬರೀ ಪ್ರೀತಿ, ಪ್ರೇಮ, ವಿರಹ, ನೋವು ಇದೆ ಎನಿಸಿ, ಗಜಲ್ ಎಂದರೆ, ಬರೀ ಪ್ರೇಮ-ವಿರಹದ ಸಾಲುಗಳು ಎಂಬ ಅಭಿಪ್ರಾಯವಿರುವುದು ಸಹಜ. ಇಲ್ಲಿ ಪರಿಚಯಿಸಿದ ಎಲ್ಲ 46 ಕವಿಗಳ ಗಜಲ್‍ಗಳು, ಆಧುನಿಕತೆಯ ಡಿಜಿಟಲ್, ವಸ್ತು ಒಳಗೊಂಡರೂ, ಮೂಲ ಅಂಶ, ಬದುಕನ್ನು ಆವರಿಸಿರುವ ಪ್ರೇಮ, ವಿರಹ, ನೋವುಗಳೇ ಆಗಿವೆ ಎಂಬುದು ಗಮನಾರ್ಹ. ಆದರೆ, ಸಾಲುಗಳ ಒಡಲಲ್ಲಿರುವ ಭಾವತೀವ್ರತೆ ಮಾತ್ರ ಗಜಲ್ ಸಾಮ್ರಾಟರ ಸಾಲುಗಳಲ್ಲಿ, ಬೆಳಕಿನ ವೇಗ ಪಡೆದಿವೆ. ವಿದ್ಯುತ್ತಿನ ಶಾಕ್ ನೀಡಿವೆ. ಕೇದಿಗೆಯ ಪರಿಮಳ ಸೂಸಿವೆ. ವಜ್ರದ ಗಟ್ಟಿತನ ತೋರಿವೆ. ಹೀಗೆ ವಿಸ್ಮಯಗಳೇ ತುಂಬಿಕೊಂಡಿವೆ. ಈ ಭಾವಾಭಿವ್ಯಕ್ತಿಗೆ ಈ ಸಾಲುಗಳನ್ನು ಹೊರತುಪಡಿಸಿ, ಪರ್ಯಾಯ ಸಾಲುಗಳಲ್ಲಿ ಹೇಳಲು ಅಸಾಧ್ಯ ಎಂಬಷ್ಟರ ಮಟ್ಟಿಗೆ ಆ ಗಜಲ್‍ಗಳು ರಚನೆಯಾಗಿವೆ. ಅವರು ಗಜಲ್‍ಗಳನ್ನೇ ಬದುಕಿದ್ದರು ಎಂಬುದಕ್ಕೆ ಅವರ ಗಜಲ್‍ಗಳು ಸಾಕ್ಷ್ಯ ನುಡಿಯುತ್ತವೆ. ಗಜಲ್ ಕುರಿತ ಲೇಖಕರ ಆಶಯವೂ ಒಳಗೊಂಡಂತೆ, ಸಾಮ್ರಾಟರ ಗಜಲ್‍ಗಳು ಪೂರ್ಣವಾಗಿ ಅಲ್ಲದಿದ್ದರೂ, ಒಂದೆಡೆ ಓದಲು ಸಿಕ್ಕುವಂತೆ ಮಾಡಿದ್ದು, ಈ ಕೃತಿಯ ವೈಶಿಷ್ಟ್ಯ. ಹೀಗಾಗಿ, 'ಗಜಲ್ ಗುಲ್ಮೋಹರ್' ಕೃತಿಯಲ್ಲಿ ಕೇವಲ 46 ಗಜಲ್‍ಕಾರರ ಪರಿಚಯ ಮಾತ್ರವಲ್ಲ; ಗಜಲ್‍ಗಳ ಮೂಲಕ ಸಾಮ್ರಾಟರ ಪರಿಚಯವೂ ಒಳಗೊಂಡಿದೆ.
©2024 Book Brahma Private Limited.