ಈ ಗಜಲುಗಳು ಹೆಚ್ಚಾಗಿ ಎರಡು ಜೀವಗಳ ಮನಸ್ಸಿನ ನಡುವಿನ ಸಂವಾದದಂತಿವೆ. ಒಂದು ಬಗೆಯ ಸೂಫಿತನವಿದೆ. ಮಾರುಕಟ್ಟೆ ಸಂಸ್ಕೃತಿಯು ಮೂಲ ಸೃಷ್ಟಿಕರ್ತರ ವೈಯಕ್ತಿಕ ಹಕ್ಕುದಾರಿಕೆಯನ್ನು ವ್ಯಾಪಾರಿ ಮೌಲ್ಯವಾಗಿಸಿರುವ ಪ್ರಸ್ತುತ ಸನ್ನಿವೇಶದಲ್ಲಿ, ಸಾಮೂಹಿಕತ್ವದ ಈ ಸಂಕಲನ ಪ್ರಕಟವಾಗುತ್ತಿರುವುದು ವಿಶೇಷ. ಇದು ಕನ್ನಡ ಕಾವ್ಯದ ಜತೆಗೆ ಉರ್ದು ಕಾವ್ಯವನ್ನು ಅನುಸಂಧಾನ ಮಾಡಿ, ಕಟ್ಟಿರುವ ಸುಂದರ ಸೇತುವೆಯಾಗಿದೆ.
ಜಕಾಪುರೆಯವರ 'ನಿನ್ನ ಮರೆಯುವ ಮಾತು' ತರಹೀಗಜಲ್ ಸಂಕಲನ ಕನ್ನಡದಲ್ಲಿ ಇದೊಂದು ವಿಶಿಷ್ಟ ಕಾವ್ಯಪ್ರಯೋಗದ ಕೃತಿ. ಉರ್ದು ಕಾವ್ಯಜಗತ್ತಿನ ಅದ್ವೈತಿಪ್ರಜ್ಞೆಯ ಈ ಕೂಡುಕಾವ್ಯ ಪರಂಪರೆ ಕನ್ನಡಕ್ಕೆ ಇದೇ ಮೊದಲ ಬಾರಿ ಪ್ರವೇಶಿಸುತ್ತಿದೆ. ಕಾವ್ಯ ತನ್ನೊಬ್ಬನದೇ ಅಲ್ಲ; ಅದು ಸಮುದಾಯಕ್ಕೆ ಸೇರಿದ್ದು ಎಂಬ ಸಾಹಿತ್ಯಕ ಬಿರಾದರಿಯಿಂದ ತರಹೀಗಜಲ್ ಹುಟ್ಟಿದೆ. ಈ ಕಾವ್ಯ ಬಿರಾದರಿಯಲ್ಲಿ ಶ್ರೇಷ್ಠತೆಯ ವ್ಯಸನದ ತರತಮಗಳಿಲ್ಲ. ಎಂತಲೇ ಇಲ್ಲಿ ಶಾಂತರಸರಿಂದ ಹಿಡಿದು ಈಚಿನ ಯುವಕವಿಗಳ ತನಕ ಎಲ್ಲರ ಕವನಗಳ ಪಾದಗಳೂ ಇವೆ. ಇದೊಂದು ಸಮಾಜವಾದಿ ಪ್ರಜ್ಞೆಯ ಕಾವ್ಯಪ್ರಕಾರ. ಇಲ್ಲಿನ ಗಜಲುಗಳಲ್ಲಿ ರಚನೆ, ಹಾಡಿಕೆ, ಕೇಳುವಿಕೆಯ ಮೂರೂ ನೆಲೆಗಳು ಜೀವಂತವಾಗಿವೆ. ಇಲ್ಲಿ ಹಿಂದಿ, ಕನ್ನಡ, ಫಾರಸಿ, ಮರಾಠಿ ಮತ್ತು ಉರ್ದು ಭಾಷಿಕ ಪರಂಪರೆಗಳು ಒಟ್ಟಿಗೆ ಕೆಲಸ ಮಾಡಿವೆ. ಹಲವಾರು ಕವಿಗಳ ಕಾವ್ಯಗಳು ಒಟ್ಟಾಗಿವೆ. ಹೀಗಾಗಿ ಇದೊಂದು ಸಂಕರ ಮತ್ತು ಬಹುತ್ವದ ಕಾವ್ಯಪದ್ಧತಿಯಾಗಿದೆ. ಇಲ್ಲಿ ಭಾಷೆಯು ರೊಟ್ಟಿಗಾಗಿ ಹಿಟ್ಟನ್ನು ನಾದಿದಂತೆ ಮೃದುವಾಗಿದ್ದು ಸಹಜತೆಯಿಂದ ಕೂಡಿದೆ. ಒಂದೇ ಓದಿಗೆ ಭಾವವನ್ನು ಎದೆಗೆ ಹೊಗಿಸುವಂತೆ ಅಭಿವ್ಯಕ್ತಿ ಹೃದ್ಯವಾಗಿದೆ. ಈ ಗಜಲುಗಳು ಹೆಚ್ಚಾಗಿ ಎರಡು ಜೀವಗಳ ನಡುವಿನ ಸಂವಾದವನ್ನು ಕುರಿತಿವೆ. ಇವುಗಳಲ್ಲಿ ಒಂದು ಬಗೆಯ ಸೂಫಿತನವೂ ಇದೆ. ಮಾರುಕಟ್ಟೆ ಸಂಸ್ಕøತಿಯು ಮೂಲ ಸೃಷ್ಟಿಕರ್ತರ ವೈಯಕ್ತಿಕ ಹಕ್ಕುದಾರಿಕೆಯನ್ನು ವ್ಯಾಪಾರಿ ಮೌಲ್ಯವಾಗಿಸಿರುವ ಪ್ರಸ್ತುತ ಸನ್ನಿವೇಶದಲ್ಲಿ, ಸಾಮೂಹಿಕ ಕವಿತ್ವದ ಈ ಸಂಕಲನ ಪ್ರಕಟವಾಗುತ್ತಿರುವುದು ವಿಶೇಷ. ಇದು ಕನ್ನಡ ಕಾವ್ಯದ ಜತೆ ಉರ್ದು ಕಾವ್ಯವನ್ನು ಅನುಸಂಧಾನ ಮಾಡಿ ಕಟ್ಟಿರುವ ಸುಂದರವಾದ ಸೇತುವೆ. ಜಕಾಪುರೆಯವರ ಅಂಕಿತ ‘ಅಲ್ಲಮ’ ಕನ್ನಡದ ಕವಿ, ವಚನಕಾರನ ಹೆಸರೂ ಹೌದು. ಉರ್ದುಕವಿ ಇಕ್ಬಾಲ್‍ರ ಬಿರುದೂ ಹೌದು. ಕರ್ನಾಟಕದ ಉರ್ದು ಹಾಗೂ ಕನ್ನಡ ಕವಿಗಳು ಒಂದೆಡೆ ಕಲೆತು ತಮ್ಮ ಕಾವ್ಯದ ಕಸುಬುದಾರಿಕೆಯನ್ನು ಹಂಚಿಕೊಳ್ಳಲು ಈ ಬಗೆಯ ಪ್ರಯೋಗಗಳು ಪ್ರೇರಣೆ ಕೊಡುವಂತಾಗಬೇಕು. ಇದೊಂದು ಸಾಂಸ್ಕಂತಿಕವಾಗಿ ಮಹತ್ವದ ಕಾರ್ಯ.
- ರಹಮತ್ ತರೀಕೆರೆ
©2024 Book Brahma Private Limited.