‘ಹೊನ್ನಗಿರಿ’ ಎಂಬುದು ಲೇಖಕ ಹಾಗೂ ಕವಿ ಸಿದ್ಧರಾಮ ಹೊನ್ಕಲ್ ಅವರ ಹೈಕುಗಳ ಸಂಕಲನ. ಜಪಾನಿ ಕಾವ್ಯ ಪ್ರಕಾರವಾದ ಹೈಕುಗಳು ಮೂರು ಸಾಲಿನಲ್ಲಿ ಒಂದು ಮಹಾಕಾವ್ಯವನ್ನೇ ಓದುಗನ ಮುಂದೆ ತೆರೆದಿಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಹೈಕುಗಳ ಲೇಖಕ ಹೆಬಸೂರು ರಂಜಾನ್ ಈ ಸಂಕಲನಕ್ಕೆ ಮುನ್ನುಡಿ ಬರೆದಿದ್ದು, ‘ ಸಿದ್ಧರಾಮ ಹೊನ್ಕಲ್ ಅವರು ಕಾವ್ಯದ ಅನೇಕ ಮಜಲುಗಳನ್ನು ಕಂಡುಂಡವರು. ಪ್ರವಾಸ ಕಥನ, ಕಾವ್ಯ, ಕತೆ, ಪ್ರಬಂಧ, ಗಜಲ್, ಟಂಕಾ, ಕಾವ್ಯದ ಹಲವು ಬಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಕಲ್ಯಾಣ ನಾಡಿನ ಸಗರದ ಪ್ರತಿಭೆ. ಮೂರು ಸಾಲಿನಲ್ಲಿ ಅವರು ಕಟ್ಟಿಕೊಡುವ ಅವರ ಹಾಯ್ಕುಗಳು ಹದಿನೇಳು ಪದಗಳ ಬಂಧವನ್ನು ಮೀರಿ ಹಾಯ್ಕುವಿನ ಅಂತಃಸತ್ವವನ್ನು ಇನ್ನು ಅಗಮ್ಯವಾಗಿ ಕಟ್ಟಿಕೊಟ್ಟಿದ್ದಾರೆ ’ ಎಂದು ಪ್ರಶಂಸಿಸಿದ್ದಾರೆ.
ಹೈಕು ಲೇಖಕ ಹಾಗೂ ಪತ್ರಕರ್ತ ಮಹಿಪಾಲ ರೆಡ್ಡಿ ಮುನ್ನೂರ್, ಹಾಯಿಕು ಲೇಖಕಿ ಹಾಗೂ ಗಜಲ್ ಲೇಖಕಿ ಜಯದೇವಿ ಗಾಯಕವಾಡ ಹುಮನಾಬಾದ, ಕೊಪ್ಪಳದ ಹಿರಿಯ ಗಜಲ್ ಹಾಗೂ ಹಾಯಿಕು ಲೇಖಕಿ ಅರುಣಾ ನರೇಂದ್ರ ಈ ಸಂಕಲನದ ಒಳಪುಟಗಳಲ್ಲಿ ತಮ್ಮ ನುಡಿಗಳನ್ನು ಹಂಚಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್ ಅವರು ಕೃತಿಗೆ ಬೆನ್ನುಡಿ ಬರೆದು ‘ಜಪಾನಿ ಮಾದರಿಯ ಹೈಕುಗಳ ಬರವಣಿಗೆ ಸಿದ್ಧರಾಮನಿಗೆ ಸಿದ್ದಿಸಿದೆ. ಕನ್ನಡಕ್ಕೆ ನೀಡಿದ ಈ ಅಪರೂಪದ ಕಾವ್ಯರೂಪಕ್ಕಾಗಿ ಲೇಖಕನನ್ನು ಅಭಿನಂದಿಸಿ, ಸಾಹಿತ್ಯ ಲೋಕ ತುಂಬು ಹೃದಯದಿಂದ ಇದನ್ನು ಸ್ವಾಗತಿಸಲಿ’ ಎಂದು ಹಾರೈಸಿದ್ದಾರೆ.
©2024 Book Brahma Private Limited.