‘ಮಲ್ಲಿಗೆಯ ಮೊಗ್ಗು’ ಎಂಬುದು ಕವಿ ಮಹೇಶ ಬಿ. ಕವಲ್ದಾರ್ ಅವರ ಗಜಲ್ ಗಳ ಸಂಕಲನ. ಗಜಲ್ ಉದ್ಯಾನವನ ಎಂದು ಕವಿಗಳು ಈ ಕೃತಿಗೆ ಉಪಶೀರ್ಷಿಕೆ ನೀಡಿದ್ದಾರೆ. ಮುರುದ್ಧಫ್, ಗೈರ್ ಮುರುದ್ಧಫ್, ಸಂಪೂರ್ಣ ಮತ್ಲಾ ಗಜಲ್, ಝೆನ್ ಗಜಲ್, ಹುಸ್ನ ಎ ಮತ್ಲಾ ಗಜಲ್, ಸ್ವರ ಕಾಫಿಯ ಗಜಲ್ ಸೇರಿದಂತೆ ವೈಚಾರಿಕತೆ, ಆಧ್ಯಾತ್ಮಿಕತೆ, ಪ್ರೀತಿ ಪ್ರೇಮ, ಮೌಲ್ಯ ಹೀಗೆ ಸಮಾಜದ ನಾನಾ ವಿಷಯ ವೈವಿಧ್ಯತೆ ಇರುವ ಸುಮಾರು 70 ಕವಿತೆಗಳಿವೆ.
ಖ್ಯಾತ ಗಜಲ್ ಕಾರ ಡಾ. ಮಲ್ಲಿನಾಥ್ ಎಸ್ ತಳವಾರ ಅವರು ಮುನ್ನುಡಿ ಬರೆದಿದ್ದು, ‘ಇಲ್ಲಿಯ ಗಜಲ್ ಗಳ ವಿಷಯದ ಹರವು ತುಂಬಾ ವಿಶಾಲವಾಗಿದೆ. ಮನಸ್ಸಿನ ಆಂತರಿಕ ತುಡಿತ, ಜೀವನದ ಅಸ್ಥಿರತೆ, ಬಾಳಿನ ಸೈದ್ಧಾಂತಿಕ-ತಾತ್ವಿಕ ಚಿಂತನೆ, ಸಾಮಾಜಿಕ ನೆಲೆಯಲ್ಲಿ ವೈಚಾರಿಕತೆ, ದೇವರು-ಧರ್ಮದ ಕುರಿತು ವಿಡಂಬನೆ, ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ಕೌಟುಂಬಿಕ-ದಾಂಪತ್ಯ ಜೀವನ... ಇವುಗಳೊಂದಿಗೆ ಗಜಲ್ ನ ಸಿಗ್ನಿಚರ್ ವಿಷಯಗಳಾದ ಮಧುಶಾಲೆ, ಮದಿರೆಯ ಘಮಲು ಹಾಗೂ ಒಲವಿನ ಕದ ತೆರೆದಾಗ ಪ್ರೀತಿ, ಪ್ರೇಮ, ಪ್ರಣಯ, ವಿರಹ, ನಿರೀಕ್ಷೆ, ಭಗ್ನ ಪ್ರೇಮ, ಕನವರಿಕೆ.. ಮುಂತಾದವುಗಳು ಕಂಡು ಬರುತ್ತವೆ. ಆದಾಗ್ಯೂ ಯಾವತ್ತಿಗೂ ಪ್ರೀತಿಯೇ ಜಗತ್ತಿನಲ್ಲಿ ಸ್ಥಾಯಿ ಭಾವ! ಸಾಮಾಜಿಕ ಕಳಕಳಿ, ಕಾಳಜಿ, ಬಂಡಾಯ, ಪ್ರತಿಭಟನೆ ಎಲ್ಲದರ ಹಿಂದೆಯೂ ಪ್ರೀತಿ ತುಡಿಯುತ್ತಿರುತ್ತದೆ. ಗಜಲ್ ಗಳಿಗೂ ಅಂತರಂಗದ ಭಾವಗಳು, ಸಂವೇದನೆಗಳು ಇಲ್ಲಿಯ ಗಜಲ್ ನ ಅಶಅರ್ ನಲ್ಲಿ ಕಾಣಬಹುದು. "ಮಲ್ಲಿಗೆ ಮೊಗ್ಗು' ಗಜಲ್ ಹೂದೋಟದಲ್ಲಿ ಹೆಚ್ಚಿನ ಗಜಲ್ ಗಳು ಐದು ಅಶಅರ್ ನ ಮುರದ್ಧಫ್ ಗಜಲ್ ಗಳಾಗಿವೆ. ಬೆರಳೆಣಿಕೆಯಷ್ಟು ಗೈರ್ ಮುರದ್ಧಫ್ ಗಜಲ್ ಗಳಿವೆ. ಗಜಲ್ ಪ್ರಕಾರಗಳಲ್ಲಿ ಒಂದೊಂದು ಸೇಹ್ ಗಜಲ್, ಝೆನ್ ಗಜಲ್ ಇವೆ. ಛೋಟಿ ರದೀಫ್, ಮಜಲುನ್ ರದೀಫ್ ಗಳನ್ನು ಹೊಂದಿರುವ ಗಜಲ್ ಗಳು ಛೋಟಿ ಹಾಗೂ ಮಧ್ಯಮ ಬೆಹರ್ ನಲ್ಲಿ ಮೂಡಿಬಂದಿವೆ(ಮಿಸ್ರಾದ ಮೀಟರ್ ಆಧರಿಸಿ). ರದೀಫ್ ಗಳ ಬಳಕೆ ಅಷ್ಟೊಂದು ಪುನರಾವರ್ತನೆ ಆಗದೆ ಇರುವುದು ಖುಷಿಯ ಸಂಗತಿ ಎಂದು ಪ್ರಶಂಸಿಸಿದ್ದಾರೆ.
ಸಾಹಿತಿ ಸೌಮಿನಿ ಚಿತ್ತಿರ ಕೃತಿಯ ಕುರಿತು ಆಶಯ ವ್ಯಕ್ತಪಡಿಸಿ ‘ ಮಹೇಶ ಕವಲ್ದಾರ್ ಅವರು ಮಲ್ಲಿಗೆಯ ಮೊಗ್ಗು ಪುಸ್ತಕ ಅಥವಾ "ಮಲ್ಲಿ"ಗೆಯ ಮೊಗ್ಗಾಗಲಿರುವ ಪ್ರಯತ್ನ ಗಜಲ್ ಅಥವಾ ಕನ್ನಡ ಸಾಹಿತ್ಯದ ಮೇಲಿರುವ ಒಲವು ಸಾಲದ್ದೆಂಬಂತೆ ಇಡಿಯಾಗಿ ಬೆರೆತು ಸಾಲುಗಳೊಂದಿಗೆ ರಮಿಸಿರುವ ರೀತಿ ಇವೆಲ್ಲವೂ ಅವರ ರಚನೆಯೆಡೆಗಿನ ಚೌಕಟ್ಟಿನಾಚೆಗಿನ ಪ್ರಣಯವನ್ನು ಶುದ್ಧ ವಾಗಿ ನಮ್ಮ ಮುಂದಿಡುತ್ತಿದೆ ಅದನ್ನು ಆಸ್ವಾದಿಸುವುದಷ್ಟೇ ನಮಗೆ ಮುಂದಿರುವ ಏಕೈಕ ದಾರಿ
ಗಜಲ್ ಗಳ ರಚನೆ ಅಥವಾ ಅದರೆಡೆಗಿನ ಒಲವು ಪ್ರಾರಂಭಗೊಂಡ ದಿನದಿಂದಲೂ ಗಮನಿಸಿದಂತೆ ತಮ್ಮ ಜೀವನ ಒರೆಯಲಿ ಇಡಬಹುಬಹುದಾದಂತ ಎಲ್ಲ ಅನುಭವ, ಭಾವ, ಅನುಭಾವಗಳನ್ನು, ನೋವನ್ನೂ, ಸುಖವನ್ನೂ ಸಮಾನವಾಗಿ ಬಂದು ಭಾವಗಳನೆಲ್ಲಾ ಗಜಲ್ ಗಳಲ್ಲಿ ಯಾವ ಮೋಸವೂ ಇಲ್ಲದೇ ಬಿತ್ತರಿಸುವುದು ನಾವಿಲ್ಲಿ ಕಾಣಬಹುದು, ಒಬ್ಬ ಮನುಷ್ಯನ ಜೀವನದಲ್ಲಿ ಬರಬಹುದಾದ ಎಲ್ಲ ಅನುಭವಗಳನ್ನೂ ಹಿಡಿದಿಟ್ಟು ಓದುಗರೇ ಅದನ್ನು ಅನುಭವಿಸುವಂತೆ ಭಾಸವಾಗುವ ಹಾಗೆ ಕಟ್ಟಿಕೊಂಡಿರುವ ನೈಪುಣ್ಯತೆ ನಮಗೆ ಈ ಪುಸ್ತಕ ಓದುವಾಗ ಅನುಭವಕ್ಕೆ ಬಾರದೇ ಹೋಗುವುದಿಲ್ಲ’ ಎಂದು ಶ್ಲಾಘಿಸಿದ್ದಾರೆ.
©2024 Book Brahma Private Limited.