ಗಜಲ್ ಕವಿ ಎಂದೇ ಖ್ಯಾತಿಯ ಡಾ.ಮಲ್ಲಿನಾಥ ಎಸ್. ತಳವಾರ ಅವರು ರಚಿಸಿದ ಗಜಲ್ ಸಂಕಲನ-ಸ್ನೇಹದ ಮಧುಶಾಲೆ. ಗಜಲ್ ಗುಲ್ಜಾರ್-ಎಂಬುದು ಕೃತಿಗೆ ನೀಡಿದ ಉಪಶೀರ್ಷಿಕೆಯು ಕೃತಿಯ ಸ್ವರೂಪ-ಸ್ವಭಾವವನ್ನು ಸೂಚಿಸುತ್ತದೆ. ‘ನನ್ನ ಮೊದಲ ಗಜಲ್ ಗುಲ್ದಸ್ಥ ‘ಗಾಲಿಬ್ ಸ್ಮೃತಿ’ ಯು ಗಜಲ್ ನ ಉಗಮ, ಸ್ವರೂಪ, ಲಕ್ಷಣ ಹಾಗೂ ಗಜಲ್ ಪ್ರಕಾರಗಳನ್ನು ಉದಾಹರಣೆಯೊಂದಿಗೆ ತಿಳಿ ಹೇಳಿದ್ದರೆ, ಎರಡನೇ ಗಜಲ್ ಸಂಕಲನ "ಮಲ್ಲಿಗೆ ಸಿಂಚನ" ಗಜಲ್ ಹೂದೋಟ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಗಜಲ್ ಪಾರಿಭಾಷಿಕ ಪದಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿತು. ಈ ಎರಡು ಪುಸ್ತಕಗಳು ಗಜಲ್ ಓದುಗರಿಂದ ಪ್ರಶಂಸೆ ಪಡೆದುಕೊಂಡು ಗಜಲ್ ಕಲಿಕೆಗೆ ದಾರಿದೀಪವಾಗಿವೆ ಎಂದು ಎಲ್ಲರಿಂದ ಷರಾ ಬರೆಯಿಸಿಕೊಂಡಿವೆ. ಇನ್ನೂ ಇದರ ಮುಂದುವರಿದ ಭಾಗವೆಂಬಂತೆ ‘ಸ್ನೇಹದ ಮಧುಶಾಲೆ’ ಇದೆ. ಕನ್ನಡ ಗಜಲ್ ಪರಂಪರೆಯಲ್ಲಿ ಮೊಟ್ಟ ಮೊದಲ ಬಾರಿಗೆ ‘ಗಜಲ್ ಬೆಹರ್’ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ. ಅಂದರೆ, ಗಜಲ್ ಛಂದಸ್ಸು ಎಂದರೇನು, ಅದರ ಸ್ವರೂಪ, ಲಕ್ಷಣ ಹಾಗೂ ಬೆಹರ್ ನಲ್ಲಿ ಇರುವ ಪ್ರಕಾರಗಳೆಷ್ಟು ಎಂಬುದರ ಕುರಿತು ಸಂಶೋಧನಾತ್ಮಕ ಬರಹವನ್ನು ಒಳಗೊಂಡಿದೆ. ಸೂಕ್ತ ಉದಾಹರಣೆಗಳೊಂದಿಗೆ ಸರಳವಾಗಿ ನಿರೂಪಿಸಿಲಾಗಿದೆ. ಇನ್ನೂ ಒಂದು ವಿಶೇಷವೆಂದರೆ ವೈವಿಧ್ಯಮಯ 96 ಗಜಲ್ ಗಳಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯ, ಕಲಬುರಗಿಯ ಉರ್ದು ಅಧ್ಯಯನ ಸಂಸ್ಥೆಯ ಮುಖ್ಯಸ್ಥರು, ಉರ್ದು ಭಾಷೆಯ ವಿದ್ವಾಂಸ ಡಾ. ಅಬ್ದುಲ್ ರಬ್ ಉಸ್ತಾದ್ ಅವರು ಮುನ್ನುಡಿ ಇದೆ’ ಎಂದು ಕವಿಗಳು ತಮ್ಮ ಗಜಲ್ ಸಂಕಲನ ಕುರಿತು ಹೇಳಿಕೊಂಡಿದ್ದಾರೆ. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಕೆ.ಐ. ಬಡಿಗೇರ ಅವರು ‘ಪ್ರತಿಭೆ, ಪರಿಶ್ರಮ ಹಾಗೂ ಶ್ರದ್ಧೆಯ ಪರಿಣಾಮವಾಗಿ ಇಲ್ಲಿಯ ಗಜಲ್ ಗಳು ಗಜಲ್ ಲೋಕದಲ್ಲಿ ಗರಿ ಮೂಡಿಸಿಕೊಂಡಿವೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.