ಕಾವ್ಯ ಪ್ರಕಾರಗಳಲ್ಲಿ ಒಂದಾದ ಗಜ಼ಲ್ ಸಾಹಿತ್ಯದ ಮೂಲಕ ಪರಿಚಿತರಾಗಿರುವ ಯುವ ಕವಿ ಸಾವನ್ ಕೆ. ಸಿಂಧನೂರು. ಸಾಬನ್‌ಸಾಬ, ಸಾವನ್ ಎಂಬ ಕಾವ್ಯನಾಮದ ಮೂಲಕ ಗಜಲ್ ಪ್ರೇಮಿಗಳ ಮನ ಕದಿಯುತ್ತಿರುವ ಯುವ ಕವಿ ಸಾವನ್. ಪ್ರೀತಿ, ಬದುಕು, ಸಮಾಜ, ಕನಸು ಇವರ ಕಾವ್ಯವಸ್ತು. ನಾನೊಬ್ಬ ಏಕಾಂಗಿ ಪಯಣಿಗ ಎನ್ನುವ ಕವಿ, ಜಾತಿ, ಧರ್ಮ ವೈಷಮ್ಯದ ಬಗ್ಗೆ ಮಾತನಾಡುತ್ತಾ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಎಚ್ಚರಿಸುತ್ತಾನೆ.
’ಇಹದೊಳಗೆ ಪರಹುಡುಕುವ ಊರಿನೋಳ್ ಒಬ್ಬಂಟಿ ಪಯಣಿಗ ನಾನು
ಮಧು ಪಾತ್ರೆಗೆ ತುಟಿ ತಾಕದೆ ನಶೆ ಏರಿದ ವ್ಯಸನಿ ಮಧುಮಗ ನಾನು’
ಜರೂರತ್ತಿನ ಹೊತ್ತಲ್ಲಿ ಪ್ರೇಮಪಾಶಕ್ಕೆ ಸಿಕ್ಕ ಯುದ್ಧಖೈದಿ ಆಗಿರುವೆ
ಜಖಂ ಆಗದಿರಲಿ ಕಾಪಿಟ್ಟ ಕನಸು ಕಾಲದ ಕೈಯಲ್ಲಿ ದನಿ ಕೇಳುಗ ನಾನು
ಉದಯಿಸಿದ ಸೂರ್ಯನಿಗೂ ಪುಟ್ಟ ಮೋಡದ್ದೇ ಆಅಪರಿಮಿತ ಅಡ್ಡಿ
ನಜರ್ ಸೇರಿಸಿ ನಾಲಿಗೆ ನೋಡುತ್ತಿಲ್ಲ ಅವಮಾನದ ಮೆನ ಹಿರಿಮಗ ನಾನು
ಸುಟ್ಟ ಗಾಯದ ವಾಸನೆ ಸೇರುತ್ತಿಲ್ಲ ಉಪ್ಪು ಸವರಿ ದುವಾ ಮಾಡಿದರು
ಬೆನ್ನಿಗೆ ಬಾಕು ಹಾಕಿ ಕಿಸಕ್ಕನೆ ನಕ್ಕವರ ಪಾಲಿಗೆ ಸಾಧನೆಯ ಸೋಜಿಗ ನಾನು
ಕಾಡು ಕಲ್ಲಿನ ನಡುವೆ ತುಳಿದವರ ಪಾದ ತಳದಲ್ಲಿದ್ದಾನೆ ಈ ’ಸಾವನ್’
ಉಳಿಯೇಟಿನಂತೆ ಆಡಿಕೊಂಡರು ಎಕ್ದಂ ಗರ್ಭಗುಡಿಯ ದೇವರಮಗ ನಾನು
©2024 Book Brahma Private Limited.