ಮನಸೇ... ಬದುಕು ನಿನಗಾಗಿ-ಈ ಕೃತಿಯನ್ನು ಲೇಖಕ ಪ್ರಭುಲಿಂಗ ನೀಲೂರೆ ರಚಿಸಿದ್ದಾರೆ. ಕವಿಗಳ ಮೊದಲ ಗಜಲ್ ಸಂಕಲನ. ಗಜಲ್ ಬರಹ ಇತ್ತೀಚೆಗೆ ಟ್ರೆಂಡ್ ಆಗಿ ರೂಪುಗೊಂಡಿದೆ. ಕವಿ ಮನಸ್ಸಿನವರನ್ನು ಈ ಪ್ರಕಾರ ಆಯಸ್ಕಾಂತದಂತೆ ಆಕರ್ಷಿಸುತ್ತಿದೆ. ಅದು ಈ ಪ್ರಕಾರಕ್ಕಿರುವ ಚುಂಬಕ ಶಕ್ತಿ. ವ್ಯಷ್ಟಿ ಪ್ರಜ್ಞೆಯಿಂದ ಸಮಷ್ಟಿಯತ್ತ ಸಾಗುವ ಗಜಲ್ ಕವಿ, ರೈತನ ಚಿಂತಾಜನಕ ಸ್ಥಿತಿಗಾತಿ ಮರಗುತ್ತಾನೆ. ಬುದ್ಧ, ಬಸವ, ಸೂಫಿ, ಶರಣರ ನೆನಪುಗಳ ಕಾಡುವಿಕೆಗೆ ‘ ಜಗಕೆ ಶಾಂತಿ ಮಂತ್ರ ಪಠಿಸಿ ನಗೆ ಹಂಚಲು ಸಜ್ಜಾಗಬೇಕಿದೆ ನೋಡು’ ಎಂದು ಹೇಳುವ ಕವಿ ಬಯಸುತ್ತಿರುವುದು ಸಮಾಜದಲ್ಲಿ ಶಾಂತಿ, ನೆಮ್ಮದಿ, ನಿರಾಂತಕ. ಧರ್ಮ, ಜಾತಿ, ಮತ, ಪಂಥಗಳ ವಿರೋಧಿಸುವ ನೀಲೂರೆಯವರು ವ್ಯವಸ್ಥೆಯ ವ್ಯಂಗ್ಯವನ್ನು ಗಜಲ್ ಮೂಲಕ ಸಮರ್ಥವಾಗಿ ಹೊರಹಾಕಿದ್ದಾರೆ.
ಪ್ರೇಮದ ಉತ್ಕಟತೆ, ವಿರಹ ವೇದನೆ, ಅಂತರಂಗದ ನೋವು, ಅಪರೂಪದ ಸಾಂಗತ್ಯ, ಎರಡು ಹೃದಯಗಳ ಮಾತು, ವೌನ, ನಲಿವು, ಮನಸ್ಸಿನ ನಿಷ್ಕಲ್ಮಷತೆ, ಒಂಟಿತನ, ಸಾತ್ವಿಕ ನಿರಾಕರಣೆ ಮುಂತಾದ ಸಂಗತಿಗಳು ಈ ಕೃತಿಯಲ್ಲಿ ಗಜಲ್ ರೂಪ ತಾಳಿವೆ. ಭಾವಗೀತೆಗಳ ಓದಿನ ಮುದ ನೀಡಿದಂತೆನಿಸಿದರೂ ಸೂಕ್ಷ್ಮತೆ, ವಿವಶತೆ, ಆರ್ದ್ರತೆಗಳಿಂದ ಒಂದುಗೂಡಿದ ಕಾವ್ಯಬಂಧದ ಕಟ್ಟುವಿಕೆ ಕವಿಗೆ ಇಲ್ಲಿ ಸಾಧ್ಯವಾಗಿದೆ.
©2024 Book Brahma Private Limited.