ಕವಿ ಡಾ. ಮಲ್ಲಿನಾಥ ಎಸ್. ತಳವಾರ ಅವರು ಗಾಲಿಬ್ ನ ಪರಿಚಯಾತ್ಮಕ ಬರಹವನ್ನು ಒಳಗೊಂಡಂತೆ ಗಾಲಿಬ್ ನನ್ನು ಉದ್ದೇಶಿಸಿ, ಸಂವಾದ ನಡೆಸಿದಂತೆ ಬರೆದ ಗಜಲ್ ಗಳ ಸಂಕಲನವಿದು. ತಮ್ಮ ಸಂಶಯ, ಅನುಭವ, ಅಭಿಪ್ರಾಯಗಳನ್ನು ಗಾಲಿಬ್ ನೊಂದಿಗೆ ಸಂವಾದಿಸಿ ಪರಿಹರಿಸಿಕೊಳ್ಳುವ ತವಕ-ತುಡಿತ ಕಾಣಬಹುದು. ಆ ಮೂಲಕ, ಗಾಲಿಬ್ ಕಂಡ ಬದುಕು ಹಾಗೂ ಪಡೆದ ಅನುಭವಗಳನ್ನು ಮೆಲುಕು ಹಾಕುವುದು ಇಲ್ಲವೇ ವ್ಯತ್ಯಾಸ ಕಾಣಿಸುವುದು ಇಲ್ಲವೇ ವಿಚಾರಗಳಲ್ಲಿ ವಿಭಿನ್ನತೆಯನ್ನು, ಔನ್ನತ್ಯವನ್ನು ಓದುಗರಿಗೆ ತೋರಿಸುವುದು ಇಲ್ಲಿಯ ಗಜಲ್ ಗಳ ಉದ್ದೇಶ ಎಂಬಂತೆ ಕವಿತೆಗಳ ಧಾಟಿ ಇದೆ. ಕವಿಗಳು ಗಾಲಿಬ್ ನನ್ನು ಒಬ್ಬ ವ್ಯಕ್ತಿಯಾಗಿ, ಕವಿಯಾಗಿ, ಚಿಂತಕರಾಗಿ ಸ್ವೀಕರಿಸಿದ ಮನೋಭಾವದ ಪರಾಕಾಷ್ಠೆಗೆ ಇಲ್ಲಿಯ ಕವನಗಳು ಕನ್ನಡಿ ಹಿಡಿಯುತ್ತವೆ. ಮಾತ್ರವಲ್ಲ; ಗಾಲಿಬ್ ನ ಬದುಕು, ಸಾಹಿತ್ಯಕ ಸಾಧನೆ ಕುರಿತು ಬರೆದ ಸುದೀರ್ಘ ಪ್ರಸ್ತಾವನೆಯೂ ಈ ಕೃತಿಯ ಮೌಲ್ಯ ಹೆಚ್ಚಿಸಿದೆ. ಸಂಕಲನದಲ್ಲಿ 101 ಗಜಲ್ ಗಳಿವೆ. ‘ರತ್ನರಾಯ ಮಲ್ಲ’ ಅಥವಾ ‘ಮಲ್ಲಿ’ ಎಂಬ ಕಾವ್ಯನಾಮದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಗಜಲ್ ಗಳನ್ನು ಬರೆಯುತ್ತಿದ್ದ ಮಲ್ಲಿನಾಥ ಎಸ್. ತಳವಾರ, ಆ ಗಜಲ್ ಗಳನ್ನು ಸಂಕಲಿಸಿದ್ದೇ ಈ ಕೃತಿ.
ಸಾಹಿತಿ ಪ್ರೊ. ಡಿ. ವಿ ಪರಮಶಿವಮೂರ್ತಿ ಅವರು ಕೃತಿಗೆ ಬೆನ್ನುಡಿ ಬರೆದು ‘ಇಲ್ಲಿಯ ಎಲ್ಲ ಗಜಲ್ ಗಳು ತಮ್ಮ ಮುಗ್ಧತೆಯಿಂದ, ಹರಳುಗಟ್ಟಿದ ಭಾಷೆಯ ಶೈಲಿಯಿಂದ ಮತ್ತು ಲೋಕಾನುಭವದ ಅಭಿವ್ಯಕ್ತಿಯ ರೂಪದಿಂದ ಓದುಗರ ಮನ ಸೆಳೆಯುತ್ತವೆ’ ಎಂದು ಶ್ಲಾಘಿಸಿದ್ದಾರೆ.
©2024 Book Brahma Private Limited.