ಕವಿ ಹೆಬಸೂರ ರಂಜಾನ್ ಸಂಪಾದಕತ್ವದ ’ ಅವ್ವನ ಪಾದದಡಿಯ ಸ್ವರ್ಗ’ ಕೃತಿಯು ಗಜಲ್ ಕವನ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಕಾಶೀನಾಥ್ ಅಂಬಲಗಿ ಅವರು, ಈಗ ಪ್ರೀತಿ ಪ್ರೇಮಗಳೇ ಜೌಟ್ ಆಫ್ ಡೇಟ್ ಆಗಿ ಅಸಹನೆ ಎಲ್ಲೆಲ್ಲಿಯೂ ಸಂಭ್ರಮಿಸುತ್ತಿರುವಾಗ ಗೆಳೆಯ ಹೆಬಸೂರ ರಂಜಾನ್ ಅವರು 65 ಗಜಲ್ ಕಾರರ ಅತ್ಯಂತ ಸಂವೇದನಾಶೀಲ ಕವಿಗಳ 61 ಗಜಲ್ ಗಳ ’ ರಂಗಿನ ಗುಲ್ ದಸ್ತಾ’ ನಮ್ಮೆದುರಿಗೆ ಇಟ್ಟಿದ್ದಾರೆ. ಕಾವ್ಯ ಕಾರ್ಮಿಕರಾದ ನನ್ನ ಪ್ರೀತಿಯು ಕವಿ ಮಿತ್ರರೇ ’ ಕವಿತೆಗಳಿಲ್ಲದಿದ್ದರೆ ಯುದ್ದಗಳು ನಿಲ್ಲಿಸಲಾಗುವುದಿಲ್ಲ ಕವಿತೆಗಳಿಲ್ಲದಿದ್ದರೆ ತಾಯಿ ಮಕ್ಕಳಿಗೆ ಆಶೀರ್ವಾದ ಮಾಡಲಾಗುವುದಿಲ್ಲ ಕವಿತೆಗಳಿಲ್ಲದಿದ್ದರೆ ಮನುಷ್ಯ ಏನಾದರೂ ಆಗಬಹುದು ಆದರೆ ಆತ ಮನುಷ್ಯನಾಗಿ ಉಳಿಯುವುದಿಲ್ಲ. ಆದ್ದರಿಂದ ಕಾವ್ಯ ಎನ್ನುವುದು ’ಕಾವ್ಯಾಧ್ಯಾತ್ಮವೋ’ ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕಾಗಿದೆ. ಇಲ್ಲಿನ ಎಲ್ಲ ಗಜಲ್ ಗಳು ಈ ರೀತಿಯ ಕಾವ್ಯಾಧ್ಯಾತ್ಮದ ಅನುಭಾವವನ್ನು ಒದಗಿಸುತ್ತದೆ . ಕನ್ನಡ ಕಾವ್ಯದಲ್ಲಿ ಈಗ ಗಜಲ್ ಘಮಲು ಎಲ್ಲಡೆಗೆ ಪಸರಿಸಿದೆ. ಗಜಲ್ ಎನ್ನುವುದು ಕಾವ್ಯ ಸಂಸ್ಕೃತಿಯನ್ನು ತಾಯಿಯ ವಾತ್ಸಲ್ಯದಂತೆ ಕಟ್ಟುವ ಕಾವ್ಯ ಪ್ರಕಾರ. ಕಾವ್ಯ ಸಂಸ್ಕೃತಿ ಎಂದರೆ ನಿಜವಾದ ಮನುಷ್ಯನಾಗುವ ಪಯಣವಾಗಿದೆ. ಅದು ಇಲ್ಲಿ ವಿಸ್ತೃತವಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
©2025 Book Brahma Private Limited.