ಗಜಲ್ ಉರ್ದು ಕಾವ್ಯದ ರಾಣಿ. ಇದೊಂದು ಹಾಡುಗಬ್ಬ. ಮಾನವ ಜೀವನದ ಎಲ್ಲ ಸಂವೇದನೆಗಳನ್ನು ಅತ್ಯಂತ ಕಡಿಮೆ ಶಬ್ದಗಳಲ್ಲಿ ಪರಿಣಾಮಕಾರಿಯಾಗಿ ಹೇಳಬಲ್ಲ ಸಾಮರ್ಥ್ಯ ಇರುವುದು ಗಜಲ್ ಕಾವ್ಯಕ್ಕೆ ಮಾತ್ರ ಎಂದು ಹೇಳಬಹುದು. ಉರ್ದು ಭಾಷೆಯಲ್ಲಿ ಹುಟ್ಟಿ ಬೆಳೆದ ಈ ಛಂದಸ್ಸು ಬರಬರುತ್ತ ವಿವಿಧ ಭಾರತೀಯ ಭಾಷೆಗಳನ್ನು ತನ್ನತ್ತ ಸೆಳೆಯಿತು. 80 ರ ದಶಕದಲ್ಲಿ ಕನ್ನಡವನ್ನೂ ತನ್ನ ಭವ್ಯಪರಂಪರೆಯ ಒಳಪಡಿಸಿಕೊಂಡಿತು. ಅಂದಿನಿಂದ ಇಂದಿನವರೆಗೆ ಹಲವಾರು ಗಜಲ್ ಸಂಕಲನಗಳು ಬಂದಿವೆ. ಆದರೆ ಗಜಲ್ ಉರ್ದುವಿನಲ್ಲಿ ನೀಡುವ ಚಮತ್ಕಾರಿಕ ಕಾವ್ಯಪರಿಣಾಮವನ್ನು ಕನ್ನಡದಲ್ಲಿ ತರಲು ಸಾಧ್ಯವಾಗಿತ್ತಿಲ್ಲ ಎಂಬ ದನಿ ಕೇಳಿ ಬರುತ್ತಿತ್ತು.
ಈ ಸಂಕಲನದ ಸಂದರ್ಭದಲ್ಲಿ ಉರ್ದುವಿನ ಈ ಛಂದಸ್ಸನ್ನು ಶುದ್ಧವಾಗಿ, ಶಾಸ್ತ್ರೋಕ್ತವಾಗಿ ಕನ್ನಡದಕ್ಕೆ ಅಳವಡಿಸಿಕೊಳ್ಳುವ ಯತ್ನ ಮಾಡಲಾಗಿದ್ದು ಗೇಯತೆಯನ್ನು ಉಳಿಸಿಕೊಳ್ಳಲಾಗಿದೆ. ಇಲ್ಲಿನ ಎಲ್ಲ ಗಜಲ್‌ಗಳು ಮಾತ್ರಾಗಣದಲ್ಲಿ ಇರುವುದರಿಂದ ಗಾಯನಕ್ಕೆ ಸಹಜವಾಗಿ ರಾಗ ತಾಳಕ್ಕೊಳಪಡುತ್ತವೆ. ಉರ್ದು ಗಜಲ್ ನೀಡುವ ಚಮತ್ಕಾರಿಕ ಅರ್ಥವನ್ನು ಇಲ್ಲಿನ ಕನ್ನಡಗಜಲ್‌ಗಳು ನೀಡುತ್ತವೆ. ಬದುಕಿನ ನೋವು, ನಲಿವು, ಸೋಲು, ಹತಾಶೆ, ಪ್ರೇಮ, ವಿರಹ, ಮೋಸ, ದೇಶ, ದೇವ, ಧರ್ಮ, ನಂಬಿಕೆ ಎಲ್ಲವೂ ಈ ಸಂಕನಲದಲ್ಲಿನ ಗಜಲ್‌ಗಳ ಕೇಂದ್ರವಸ್ತು.
ಈ ಸಂಕಲನದಲ್ಲಿ ಮುರದ್ಧಫ್, ಗೈರ್‌ಮುರದ್ಧಫ್ ಮತ್ತು ಮುಸಲ್‌ಸಲ್, ಗೈರ್ ಮುಸಲ್‌ಸಲ್ ಪ್ರಕಾರದ ಗಜಲ್‌ಗಳಿವೆ. ಕಡಿಮೆ ಶಬ್ದಗಳಲ್ಲಿ ಹೆಚ್ಚಿನ ಅರ್ಥಗಳನ್ನು ನೀಡುವ ಹಲವಾರು ಶಾಹಿರಿಗಳು ಇಲ್ಲಿದ್ದು ರೂಪಕ, ಪ್ರತಿಮೆಗಳಲ್ಲಿಯೇ ಭಾವವನ್ನು ಹಿಡಿಯಲಾಗಿದೆ.
©2024 Book Brahma Private Limited.