‘ದರ್ದಿಗೆ ದಾಖಲೆಗಳಿಲ್ಲ’ ಕವಿತಾ ಸಾಲಿಮಠ ಅವರ ಗಜಲ್ ಸಂಕಲನ. ಈ ಕೃತಿಗೆ ಅಬ್ದುಲ್ ಹೈ, ತೋರಣಗಲ್ಲು ಮುನ್ನುಡಿ ಬರೆದಿದ್ದಾರೆ. ಗಜಲ್ ಸಂಕಲನದ ಕುರಿತು ಬರೆಯುತ್ತಾ..ಕವಿ ಬಾಹ್ಯದಲ್ಲಿ ಸಂಘ ಜೀವಿಯಂತೆ ಕಂಡರೂ ಅಂತರಂಗದಲ್ಲಿ ಅವನು ತನ್ನೊಟ್ಟಿಗೆ ತಾನು ಅನುಸಂಧಾನಕ್ಕಿಳಿಯುತ್ತಾನೆ. ಪರಿಣಾಮ ಆತನ ಮನದಲ್ಲಿ ಸ್ಪಷ್ಟ ರೂಪದ ಚಿತ್ರಣ ಮೂಡುತ್ತದೆ. ಅದನ್ನ ಹಿಗ್ಗಿಸಿ ವಿವಿಧ ಆಕಾರವಾಗಿಸುತ್ತಾ ಅದಕ್ಕೊಂದು ಸುಂದರ ರೂಪ ಕೊಡುತ್ತಾನೆ, ಹಾಗೆ ರೂಪಿಸುವಾಗ ತೋರಣದಿಂದ ಆಕೃತಿಗೆ ಜೀವ ತುಂಬಿ ಕಾವ್ಯವಾಗಿಸುತ್ತಾನೆ, ಹೀಗೆ ಹುಟ್ಟಿದ ಕಾವ್ಯಕ್ಕೆ ಸಾಂಸ್ಕೃತಿಕವಾದ ತಾತ್ವಿಕ ನೆಲೆಯಿರಬೇಕು. ಆ ನೆಲೆಯ ಶೋಧಿಸಿ ಭಾವ ಜೀವಗಳ ಬೆಳಕ ಕೋಲಿನ ಹೆಜ್ಜೆ ಹುಡುಕಿ ದ್ವೇಷಕ್ಕೆ ನಾಕಾಬಂದಿ ಹಾಕಿ ಮನುಷ್ಯನಲ್ಲಿ ಪ್ರೀತಿಯ ಮೊಗ್ಗು ಅರಳಿಸಬೇಕು. ಪರಂಪರೆಯನ್ನು ಪೊರೆಯುತ್ತಲೇ 'ಅತೀತವೊಂದು ವರ್ತಮಾನದ ಜೊತೆನಿಂತು ಪ್ರೀತಿಯ ಪಾಲುದಾರಿಕೆಗೆ ಒತ್ತುಕೊಡುವ ಬಹು ಸುಂದರ ಭವಿಷ್ಯವನ್ನು ಬರಮಾಡಿಕೊಳ್ಳಬೇಕು. ಇಂಥಹ ಉಮ್ಮಿದಿನ ಪ್ರಯೋಗ ಶೀಲತೆಗೆ ಒಡ್ಡಿಕೊಳ್ಳುವುದು ಹೊಸ ತಲೆಮಾರಿನ ಗಜಲ್ಕಾರರಿಗೆ ಸ್ವಲ್ಪ ಕಷ್ಟಸಾಧ್ಯ. ಅದರಲ್ಲೂ ಗಜಲ್ ಸೌಂದರ್ಯದ ಸೊಕ್ಕನ್ನು ಮುರಿದು ಪರಂಪರೆಯನ್ನು ಪೊರೆಯುತ್ತಲೇ ಶೋಷಿತ ಮತ್ತು ಪೀಡಿತ ಜನಕೋಟಿಯ ಕಷ್ಟಗಳಿಗೆ ಸ್ಪಂದಿಸುತ್ತಾ ಬರೆದು ಗೆಲ್ಲುವುದು ತುಂಬಾ ಕಷ್ಟ. ಸಿದ್ಧಮಾದರಿಯ ಬಂಧಗಳ ಮುಂದು ಹೊಸ ಭರವಸೆ ಮೂಡಿಸಿದ ಕೆಲವೇ ಕೆಲ ಗಜಲ್ಕಾರದಲ್ಲಿ ಕವಿತಾ ಸಾಲಿಮಠ ಕಾಣಸಿಗುತ್ತಾರೆ ಎಂದಿದ್ದಾರೆ ಅಬ್ದುಲ್ ಹೈ ತೋರಣಗಲ್ಲು.
©2024 Book Brahma Private Limited.