‘ಗೋಲಗುಮ್ಮಟ’ ಲೇಖಕ ರಾಜಶೇಖರ ಕುಕ್ಕಂದಾ ಅವರು ಮಕ್ಕಳಿಗಾಗಿ ರಚಿಸಿದ ಕವಿತೆಗಳ ಸಂಕಲನ. ಇಲ್ಲಿಯ ಪ್ರಾಸಬದ್ಧ ಕವಿತೆಗಳು ಓದುಗರಿಗೆ ಮುದ ನೀಡುತ್ತವೆ. ಹಾಡಬಹುದು. ಮಕ್ಕಳ ಮನೋರಂಗದ ಕುತೂಹಲ, ವಿಸ್ಮಯ, ತರಲೆ-ತುಂಟಾಟಗಳೆಲ್ಲ ಇಲ್ಲಿಯ ಕವಿತೆಗಳ ವಸ್ತು. ಕಲಾವಿದ ಹರಿಣಿಯವರ ಚಿತ್ರಗಳು ಖುಷಿ ಕೊಡುತ್ತವೆ. ಕವಿತೆಗಳ ಅರ್ಥವಂತಿಕೆಯನ್ನು ಹೆಚ್ಚಿಸಿವೆ.
ಮಕ್ಕಳಲ್ಲಿ ಆಸಕ್ತಿ ಹುಟ್ಟಿಸುವ ರಂಜನೀಯ ಕವಿತೆಗಳು
ಶಿಶುಗೀತೆ ರಚನೆಯಲ್ಲಿ ಹಲವು ವರ್ಷಗಳ ಕೃಷಿ ನಡೆಸಿರುವ ಲೇಖಕ 'ರಾಜಶೇಖರ ಕುಕ್ಕುಂದಾ' ಅವರ ಅನೇಕ ಕವನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಈ ಕವನಗಳ ಆಯ್ದ ಸಂಕಲನ ಇದು. ಮಕ್ಕಳ ಆಸಕ್ತಿ, ಆಕರ್ಷಣೆ, ಹುಡುಗಾಟಗಳು ಇವರ ಕವಿತೆಗಳ ಮೂಲಕ ತೆರೆದುಕೊಳ್ಳುತ್ತವೆ. ಸರಳವಾದ ಭಾಷೆ, ಪ್ರಾಸ, ಲಯಬದ್ಧತೆ ಹೊಂದಿದ ಕವಿತೆಗಳು ಎಲ್ಲರಿಗೂ ಮುದ ನೀಡುವಂತಿವೆ. ಮಗುವಿನ ಮನಸ್ಸಿನಲ್ಲಿ ಏಳುವ ಪ್ರಶ್ನೆ,
ಅಪ್ಪನು ತಪ್ಪನ್ನು
ಮಾಡಲೆ ಇಲ್ಲವೆ
ಸಣ್ಣವನಿರುವಾಗ?
ಅಪ್ಪಗೆ ಜಬರಿಸಿ
ಅಜ್ಜಿಗೆ ನೆನಪಿಸಿ
ಕೇಳುವರಾರೀಗ?
ಎಂದು. ಅಡುಗೆ ಮನೆ ಕಡೆ ಹರಿಯುವ ಮಗುವಿನ 'ಚಂಚಲ ಮನಸ್ಸು' ಎಲ್ಲರ ಅನುಭವ ಕೂಡ. ಮಕ್ಕಳ ಮನೋವ್ಯಾಪಾರವನ್ನು ಬಂಡವಾಳ ಮಾಡಿಕೊಂಡು ರಚಿಸಿರುವ ಇಲ್ಲಿನ ಶಿಶುಗೀತೆಗಳು ನಿಜಕ್ಕೂ ರಂಜನೀಯ. ಆಸಕ್ತಿ ಹುಟ್ಟಿಸುವ ಕವನಗಳಿಗೆ ಪೂರಕವಾದ ಚಿತ್ರಗಳು ಕವನಗಳನ್ನು ಇನ್ನಷ್ಟು ರಂಜನೀಯಗೊಳಿಸಿವೆ.
- ಭಾರ್ಗವ
(ಸೌಜನ್ಯ: ಕನ್ನಡ ಪ್ರಭ, 20 ಜೂನ್ 2004)
©2024 Book Brahma Private Limited.