‘ಬಿಸಿ ಬಿಸಿ ಬಾತು’ ಕೃತಿಯು ರಾಜಶೇಖರ ಕುಕ್ಕುಂದಾ ಅವರ ಮಕ್ಕಳ ಕವಿತಾ ಸಂಕಲನವಾಗಿದೆ. ಮಕ್ಕಳಿಗಾಗಿ ಸಾಹಿತ್ಯ ಸೃಷ್ಟಿಸುವುದು ಸರಳವಲ್ಲ. ಸರಳವಾಗಿ ಬರೆಯುವುದು ಕಠಿಣವೆನ್ನುತ್ತಾರೆ. ಮಕ್ಕಳಿಗಾಗಿ ಬರೆಯುವವರಿಗೆ ಅವರ ಮನೋಮಟ್ಟದ ಅರಿವಿರಬೇಕು. ಹೀಗೆ ಮಕ್ಕಳ ಮನವರಿತು ಸೃಜನಶೀಲತೆಯಿಂದ ಕಾವ್ಯ ರಚನೆಯಲ್ಲಿ ತೊಡಗಿಕೊಂಡವರಲ್ಲಿ ರಾಜಶೇಖರ ಕುಕ್ಕುಂದಾ ಅವರು ಪ್ರಮುಖರೆನಿಸುತ್ತಾರೆ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದುಕೊಂಡು ಕಾವ್ಯ ರಚನೆಯಲ್ಲಿ ತೊಡಗಿರುವ ಕುಕ್ಕುಂದಾ ಅವರ ಹೊಸ ಸಂಕಲನ ‘ಬಿಸಿ ಬಿಸಿ ಬಾತು’ ಮಕ್ಕಳೆಲ್ಲಾ ಮೆಚ್ಚುವ ಹೊಸ ರುಚಿಯಾಗುವುದರಲ್ಲಿ ಸಂದೇಹವಿಲ್ಲ. ಮಕ್ಕಳ ಸಾಹಿತ್ಯದ ರಚನೆ ಎಷ್ಟು ಕಠಿಣವೋ ಅಷ್ಟೇ ಕಷ್ಟ ಮಕ್ಕಳ ಪುಸ್ತಕ ಪ್ರಕಾಶನ. ಇದೊಂದು ಲಾಭದಾಯಕ ಕೆಲಸವಲ್ಲದಿದ್ದರೂ ಮಕ್ಕಳಿಗೆ ಸಚಿತ್ರ ಪುಸ್ತಕವನ್ನು ಕೈಗಿಡುವ ಕಾಯಕಕ್ಕೆ ನಾವು ಬದ್ಧರಾಗಿದ್ದೇವೆ. ಲೇಖಕ ಚೆಸ್ಟರ್ಟನ್ ಅವರ ‘ಚಿತ್ರವಿರದ ಪುಸ್ತಕ ಮಕ್ಕಳ ಪುಸ್ತಕವಲ್ಲ’ ಎಂಬ ಮಾತನ್ನು ‘ಅವ್ಯಕ್ತ ಪ್ರಕಾಶನ’ ಹೃದಯಕ್ಕಿಳಿಸಿಕೊಂಡು ಪ್ರಕಾಶನ ಮಾಡುತ್ತಿದೆ. ನಮ್ಮ ಎಲ್ಲಾ ಮಕ್ಕಳ ಪುಸ್ತಕ ಸಚಿತ್ರದಿಂದ ಕೂಡಿವೆ. ಈ ನಿಟ್ಟಿನಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ ವಿ. ಮನೋಹರ್ ಅವರು ಚಿತ್ರ ಬಿಡಿಸಿರುವುದು ಹೆಮ್ಮೆಯ ವಿಷಯ.
"ಹೋಂ ವರ್ಕ್" ಹೋಂ ವರ್ಕ್ , ಹೋಂ ವರ್ಕ್ಙ ಏನ್ಮಾಡೋದು? ಕಸಾ ಗುಡ್ಸಿ ಮನೇನೆಲ್ಲಾ ಸ್ವಚ್ಛ ಇಡೋದು! ಹೋಂ ವರ್ಕ್ , ಹೋಂ ವರ್ಕ್ ಏನ್ಮಾಡೋದು? ಹಿತ್ತಲ ಗಿಡಕ ನೀರ್ಬಿಟ್ಟು ತಂಪು ಮಾಡೋದು! ಹೋಂ ವರ್ಕ್ , ಹೋಂ ವರ್ಕ್ ಏನ್ಮಾಡೋದು? ಎಣ್ಣೆ ಹಚ್ಚಿ ಹೆಂಚಿನ ಮೇಲೆ ದೋಸೆ ಹುಯ್ಯೋದು! ಹೋಂ ವರ್ಕ್ , ಹೋಂ ವರ್ಕ್ ಏನ್ಮಾಡೋದು? ಉಳ್ಳಾಗಡ್ಡಿ ಕತ್ತರ್ಸಿಟ್ಟು ಚಟ್ನಿ ಮಾಡೋದು! ಹೋಂ ವರ್ಕ್ , ಹೋಂ ವರ್ಕ್ ಏನ್ಮಾಡೋದು? ಡಬ್ಬಿ ತೆಗ್ದು ಉಂಡಿ ತಿಂದು ಗಪ್ಪ ಮಾಡೋದು! ಹೋಂ ವರ್ಕ್ , ಹೋಂ ವರ್ಕ್ ಏನ್ಮಾಡೋದು? ಅಜ್ಜ - ಅಜ್ಜೀನ ಗೋಳಾಡ್ಸಿ ಸುಮ್ನೆ ಕಾಡೋದು! - ರಾಜಶೇಖರ ಕುಕ್ಕುಂದಾ, ಬಾಗಲಕೋಟೆ
ಮಕ್ಕಳ ಚಿತ್ತದಲ್ಲಿ ಬೆಳೆಯುವಂತಿವೆ. ಕುಟುಂಬ, ಸಮಾಜದ ಪರಿಕಲ್ಪನೆಯನ್ನು ಮಕ್ಕಳಿಗೆ ಕಟ್ಟಿಕೊಡಬಲ್ಲ ಗುಣದ ಈ ರಚನೆಗಳು ಶಬ್ದ ಚಮತ್ಕಾರದ ಮೂಲಕ ಮಕ್ಕಳಿಗೆ ಕನ್ನಡ ಪಾಠವನ್ನೂ ದಾಟಿಸುವಂತಿವೆ. ಇವು ಎಳೆಯರಿಗೆ ಮಾತ್ರವಲ್ಲದೆ, ಕಾವ್ಯಪ್ರೀತಿಯ ದೊಡ್ಡವರಲ್ಲೂ ಉಲ್ಲಾಸ ತುಂಬಬಲ್ಲವು, ಕಚಗುಳಿ ಇಡಬಲ್ಲವು. ಪೌಷ್ಟಿಕಾಂಶಗಳನ್ನು ಹೊಂದಿರುವುದರ ಜೊತೆಗೆ, ಗರಿಗರಿಯಾಗಿಯೂ ರುಚಿಕರವೂ ಆಗಿರುವ ತಿನಿಸಿನಂತೆ ರಾಜಶೇಖರರ ಕವಿತೆಗಳು ಮಕ್ಕಳ ಮನಸ್ಸಿನ ಚೆಲುವಿಗೆ ಹಾಗೂ ವಿಕಸನಕ್ಕೆ ಅಗತ್ಯವಾದ ಗುಣಗಳನ್ನು ಹೊಂದಿವೆ. ಮಕ್ಕಳ ಬಗ್ಗೆ ಅಪಾರ ಮಮತೆಯುಳ್ಳ ಕವಿಯ ಅಡುಗೆಮನೆಯಲ್ಲಿ ತಯಾರಾದ ಈ ಬಾತಿನ ಸವಿ ಸುಲಭಕ್ಕೆ ತೀರುವಂತಹದ್ದಲ್ಲ; ಬಿಸಿ ಆರುವಂತಹದ್ದಲ್ಲ. ಕನ್ನಡದ ಮಕ್ಕಳು ಹಾಗೂ ಪೋಷಕರು ಪ್ರೀತಿಯಿಂದ ಬರಮಾಡಿಕೊಳ್ಳಬೇಕಾದ ಕೃತಿ ‘ಬಿಸಿ ಬಿಸಿ ಬಾತು’. -ರಘುನಾಥ ಚ.ಹ.
©2025 Book Brahma Private Limited.