ತಮ್ಮಣ್ಣ ಬೀಗಾರ ಅವರು ಮಕ್ಕಳಿಗಾಗಿ ಬರೆದ ಕೃತಿ ಪುಟ್ಟಜ್ಜನ ನೆನಪಿನ ಡೈರಿ. ಆನಂದ ಪಾಟೀಲ್ ಅವರು ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಬಾಲ್ಯ ಎನ್ನುವುದು ಎಲ್ಲರ ಬದುಕಿನಲ್ಲಿ ಒಂದು ಚೈತನ್ಯಯುತ ಖುಷಿಯ ಪಯಣವಾಗಿ ನೆನಪಿನಲ್ಲಿ ಉಳಿಯುವುದೇ ಹೆಚ್ಚು. ಮಕ್ಕಳಿಗಾಗಿ ಬರೆಯುವುದೆಂದರೆ ಬಾಲ್ಯಕ್ಕೆ ಮರಳಿ ಮಗುತನದ ಮುಗ್ಧ ಕಣ್ಣಿಂದ ನೋಡುತ್ತ... ಹಿರಿಯನಾಗಿ ತನ್ನ ಅನುಭವಕ್ಕೆ ದಕ್ಕಿದ, ಅರಗಿಸಿಕೊಂಡ ಸತ್ಯದೊಂದಿಗೆ ಬೆರೆಸಿ ನೀಡುವುದೇ ಆಗಿದೆ. ಯಾವುದೇ ಬರಹಗಾರನಿಗಾದರೂ ಅವನ ಬಾಲ್ಯ ಅವನಿಗೆ ಒಂದಿಷ್ಟು ಚೈತನ್ಯವನ್ನು ಬೇರೆ ಬೇರೆ ರೀತಿಯಲ್ಲಿ ನೀಡುತ್ತಲೇ ಇರುತ್ತದೆ. ಇಲ್ಲಿ ನಾನು ‘ಪುಟ್ಟಜ್ಜನ ನೆನಪಿನ ಡೈರಿ’ಯನ್ನು ಬಿಚ್ಚಿಟ್ಟುಕೊಂಡಿದ್ದೇನೆ. ಹೌದು ಇಲ್ಲಿನ ಬರಹಗಳು ನನ್ನ ಬಾಲ್ಯದಲ್ಲಿ ನನ್ನ ಅನುಭವಕ್ಕೆ ದಕ್ಕಿದ ಮೂಸೆಯಲ್ಲಿ ಮೂಡಿದುದೇ ಆಗಿದೆ. ನಮ್ಮದು ಮಲೆನಾಡ ಕಾಡಿನ ಹಳ್ಳಿ. ಅಲ್ಲಿ ಬೆಳೆದ ನಾನು ಪ್ರಾಕೃತಿಕವಾಗಿ ಅಲ್ಲಿ ನಡೆದ ಸಂಗತಿಗಳು, ಅಲ್ಲಿನ ಮಕ್ಕಳ ಆಟಗಳು, ವಿವಿಧ ರೀತಿಯ ಬೆಳವಣಿಗೆಗೆ ಊರು ತೆರೆದುಕೊಳ್ಳುತ್ತಿದ್ದಾಗ ಅಲ್ಲಿ ಆದ ಖುಷಿ ಹಾಗೂ ಆತಂಕಗಳು, ಆಲೆಮನೆ, ಯಕ್ಷಗಾನ, ಮದುವೆಯಂತಹ ಸಂಭ್ರಮಗಳನ್ನೆಲ್ಲ ಮಕ್ಕಳದೇ ಕಣ್ಣಿಂದ ನೋಡುತ್ತ, ಅವರ ಸುತ್ತಲೇ ಓಡಾಡುತ್ತ ಇಲ್ಲಿ ದಾಖಲಿಸಿದ್ದೇನೆ. ಇದು ಮಕ್ಕಳಿಗೆ ಮೂವತ್ತು ನಲವತ್ತು ವರ್ಷಗಳ ಹಿಂದಿನ ಅವರ ಸುತ್ತಲಿನ ಸಂಗತಿಯನ್ನು, ಖುಷಿಯನ್ನು ಹೇಳುತ್ತದೆಯಾದರೆ... ಹಿರಿಯರಿಗೆ ತಮ್ಮ ಬಾಲ್ಯಕ್ಕೆ ಮರಳಿ ಬಾಲ್ಯದ ನೆನಪಿನೊಂದಿಗೆ ಸಂಭ್ರಮಿಸಲು ಕರೆಯತ್ತದೆ ಎಂದು ನನಗೆ ಅನಿಸಿದೆ ಎಂಬುದಾಗಿ ಲೇಖಕರೇ ಹೇಳಿದ್ದಾರೆ.
©2025 Book Brahma Private Limited.