‘ಮಕ್ಕಳಿಗಾಗಿ ಮಹಾತ್ಮ’ ಕೃತಿಯು ಉದಯ ಗಾಂವಕಾರ ಅವರ ಮಕ್ಕಳ ಸಾಹಿತ್ಯ ಕುರಿತ ಕೃತಿಯಾಗಿದೆ. ಕೃತಿಯ ಕುರಿತು ಬೋಳುವಾರು ಮಹಮ್ಮದ್ ಕುಂಞ ಅವರು, ಎಂಟನೆಯ ತರಗತಿಯ ಹುಡುಗಿಯೊಬ್ಬಳನ್ನೊಮ್ಮೆ, ನೀನು ಬೆಳೆದು ದೊಡ್ಡವಳಾದ ಬಳಿಕ ಯಾರಂತೆ ಆಗುತ್ತಿ?' ಎಂದು ಪ್ರಶ್ನಿಸಿದಾಗ ಸ್ವಲ್ಪವೂ ತಡವರಿಸದೆ ಅವಳು, 'ಮಹಾತ್ಮ ಗಾಂಧಿಯಂತೆ' ಎಂದಿದ್ದಳು. 'ಅದು ಹೇಗೆ ಸಾಧ್ಯ! ನೀನು ಹುಡುಗಿಯಲ್ಲವೆ?' ಎಂದು ಅಡ್ಡ ಪ್ರಶ್ನೆ ಹಾಕಿದಾಗ ಅವಳು, 'ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯನ್ನು ಬೋಧಿಸುವ ದೇವದೂತ ಇದ್ದ ಹಾಗೆ, ಮನಸ್ಸು ಮಾಡಿದರೆ ಯಾರೂ ಅವರಂತೆ ಆಗಬಹುದು' ಎಂದು ಉತ್ತರಿಸಿದ್ದಳು. ಸತ್ಯವನ್ನಲ್ಲದೆ ಬೇರೇನನ್ನೂ ಹೇಳದಿದ್ದ. ಶಾಲೆಯ ಪರೀಕ್ಷೆಯಲ್ಲಿ ನಕಲು ಹೊಡೆಯಲು ಅವಕಾಶವಿದ್ದರೂ ನಿರಾಕರಿಸಿದ್ದ, ಬಂಗಾರದ ಕಡಗ ಕದ್ದ ಅಣ್ಣನಿಗೆ ಸಹಾಯ ಮಾಡಿದ್ದಕ್ಕೆ ಪಶ್ಚಾತ್ತಾಪಗೊಂಡು ತಂದೆಯವರಲ್ಲಿ ಕ್ಷಮೆ ಯಾಚಿಸಿದ್ದ, ಕರಿಯನೆಂಬ ಕಾರಣಕ್ಕೆ ಬಿಳೆಯರಿಂದ ರೈಲಿನಿಂದ ಹೊರಗೆ ದೂಡಿಸಿಕೊಂಡಿದ್ದ. 'ಸತ್ಯಾಗ್ರಹ' ಎ೦ಬ ಅಹಿಂಸೆಯ ಆಯುಧ ಬಳಸಿ, ಅದೇ ಬೆಳೆಯರ ವಿರುದ್ಧ ಹೋರಾಡಿ ದೇಶವನ್ನು ಗುಲಾಮಗಿರಿಯಿಂದ ಬಿಡಿಸಿಕೊಟ್ಟಿದ್ದ. ಹೀಗೆ ದೇವದೂತರಂತೆ, ತಪ್ಪೇ ಮಾಡದೆ ಆದರ್ಶವಾಗಿ ಬದುಕಿದ ಆ ಮಹಾತ್ಮನ ಬಗ್ಗೆ ಆಕೆಗೆ ಹಲವು ಸಂಗತಿಗಳು ಗೊತ್ತಿತ್ತು. ಯಾಕೆಂದರೆ, ನಮ್ಮ ನಾಡಿನ ಮತ್ತೊಂದು ಧರ್ಮಗ್ರಂಥವೇ ಆಗಿರುವ ಗಾಂಧೀಜಿಯವರ ಬಗ್ಗೆ ಪ್ರಕಟವಾಗಿರುವ ನೂರಾರು ಜೀವನ ಕತೆಗಳಲ್ಲಿ ಕೆಲವನ್ನು ಅವಳೂ ಓದಿಕೊಂಡಿದ್ದಳು. ಗೆಳೆಯ ಉದಯ ಗಾಂವಕರ ಬರೆದಿರುವ 'ಮಕ್ಕಳಿಗಾಗಿ ಮಹಾತ್ಮ' ಎಂಬ ಈ ಪುಟ್ಟ ಕೃತಿ, ಅವಳಂತಹ ನೂರಾರು ಪುಟ್ಟ ಮಕ್ಕಳಿಗೆ ಗಾಂಧೀಜಿಯವರ೦ತಾಗಲು ದಾರಿ ಕಾಣಿಸುವ ಕೃತಿ ಇದಾಗಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.