ಐದನೆಯ ತರಗತಿಯ ಕಿಶೋರ ಸಾಹಿತಿ ಅಂತಃಕರಣ ಭರವಸೆ ಮೂಡಿಸುವ ಕವಿ-ಲೇಖಕ. ಅಂತಃಕರಣ ಬರೆದ 40 ಕವಿತೆಗಳು ’ಅಮ್ಮನ ಸಿಟ್ಟು’ ಸಂಕಲನದಲ್ಲಿವೆ. ಈ ಸಂಕಲನದ ಕವಿತೆಗಳ ಬಗ್ಗೆ ಕವಯತ್ರಿ ಜ್ಯೋತಿ ಆರ್. ಗುರುಪ್ರಸಾದ್ ಅವರು ’ಕವನ ಕಟ್ಟುವಿಕೆಯನ್ನು ಸಂಭ್ರಮಿಸುವ ಅಂತಃಕರಣನ ಸ್ಫೂರ್ತಿ ಆಧುನಿಕತೆಯ ಯಾಂತ್ರಿಕತೆಯಿಂದ ವಿಚಲಿತವಾಗದೆ ಅವುಗಳಿಂದ ತನಗಾಗಿರುವ ಪರಿಣಾಮವನ್ನು ಮುಗ್ಧವಾಗಿ ಮೆಚ್ಚಿಕೊಳ್ಳುತ್ತಾ ಹೋಗುವುದು ಬಾಲಕನೊಬ್ಬನ ಆತ್ಮಕಥೆಯ ಮೆಲುದನಿಯಂತೆ ಕೇಳಿಸುತ್ತದೆ. ಈ ಮೆಲುದನಿ ಅಮ್ಮನ ಸಿಟ್ಟನ್ನೂ ವಿಮರ್ಶಿಸುತ್ತಲೇ ಗಟ್ಟಿಯಾಗುತ್ತದೆಂಬುದೇ ಈ ಸಂಕಲನದ ಹೆಗ್ಗಳಿಕೆ.
ಇವನ ಅಮ್ಮನ ನಿಸ್ಸಹ ದುಡಿಮೆ, ದೊಡ್ಡತ್ತೆಯ ಕೈಯ ಅಡಿಗೆ ರುಚಿ, ಸ್ನೇಹಿತ ತಾನು ಓದುವ ಶಾಲೆಯನ್ನು ಬಿಟ್ಟು ಹೋದಾಗ ಆಗಿರುವ ಬೇಸರ, ಇವನ ತಾತ, ಅಪ್ಪ, ಅಣ್ಣ, ತಮ್ಮ, ಶಾಲೆ, ಊರು, ಎಲ್ಲವೂ ಇವನ ಕವನದ ವಸ್ತುಗಳಾಗುವ ಹಾಗೆ ಬಸ್ಸು, ಕಾರು, ತುಂತುರು ಎಂಬ ಮಕ್ಕಳ ಕನ್ನಡ ಪತ್ರಿಕೆ ಹಾಗೂ ಟಿಂಕಲ್' ಎಂಬ ಇಂಗ್ಲಿಷ್ ಭಾಷೆಯ ಮಕ್ಕಳ ಪತ್ರಿಕೆಗೂ ಇವನು ಋಣಿಯಾಗಿರುವ ಪರಿ ಇವನ ಎಳೆಯ ಮನಸಿನ ಅಂತಃಕರಣದ ಎಳೆಗಳಾಗಿ ಸುಂದರವಾಗಿ ಬಿಡಿಸಿಕೊಳುತ್ತತ ಇವನ ಮುಗ್ಧ ಪ್ರಪಂಚವನ್ನು ಆಳುತ್ತದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.