’ಹಾಡೆ ಸುವ್ವಿ’ ಕೃಷ್ಣಮೂರ್ತಿ ಬಿಳಿಗೆರೆ ಅವರು ಮಕ್ಕಳಿಗಾಗಿ ರಚಿಸಿದ ಹಾಡುಗಳ ಸಂಕಲನ. ಮಕ್ಕಳ ಸಾಹಿತ್ಯ ರಚಿಸಬೇಕಾದರೆ ಮಕ್ಕಳ ಒಡನಾಟದಿಂದ ದಕ್ಕಿದ ಅನುಭವವನ್ನೇ ಬರೆಯಬೇಕಾಗುತ್ತದೆ ಎನ್ನುವುದಕ್ಕೆ ಇಲ್ಲಿನ ಮುಖವಾಡವೆಂದರೆ ಭಯವಾಗುತ್ತೆ, ಕುಂಟುನಾಯಿ, ಇಲ್ಲೇನ್ ಕೆಲಸ ಬಾರೋ ಚಂದು, ಅತ್ತೆ ಅತ್ತೆ ಇಲ್ನೋಡತ್ತೆ, ನಾಯಿನೆಂಟ, ನೀರುಧ್ಯಾನ, ಮಣ್ಣಿನ ಅಡುಗೆ ಮಾಡ್ತೀನಿ, ಇಂತಹ ಪದ್ಯಗಳೇ ಸಾಕ್ಷಿ.
ಈ ಕೃತಿಯ ಬಗ್ಗೆ ಸಾಹಿತಿ ಆನಂದ ಪಾಟೀಲರು ಮುನ್ನುಡಿಯಲ್ಲಿ ಹೀಗೆ ಅಭಿಪ್ರಾಯ ಪಡುತ್ತಾರೆ. ನಮ್ಮ ಹಳ್ಳಿಗಾಡಿನ ಜನ ಹಾಡಿನಲ್ಲಿ ತಮ್ಮದೆಲ್ಲವನ್ನ ದನಿಯಾಗಿಸಿದವರು. ಕನ್ನಡಕ್ಕೆ ನವೋದಯ ತಂದ ಹಿರಿಯರೆಲ್ಲೆಲ್ಲ ಈ ಹಾಡಿನ ಹುಚ್ಚು ಮೆತ್ತಿಕೊಂಡೇ ಬಂತು, ಈಗ ನಮ್ಮ ನಡುವೆ ಹಾಡಿಲ್ಲವೆ? ಇದೆ ಮಾರಾಯರೆ, ತರಹೇವಾರಿಯಾಗಿದೆ. ನಿಶೆ ಏರಿಸುವ ಹಾಡೇ ಇದೆ. ಕೀಸರುಬಾಸರು ಹಿಡಿಸುವಷ್ಟು ಹಾಡು ತುಂಬಿಕೊಳ್ಳುತ್ತಲೇ ಇದೆ. ಬಿಳಿಗೆರೆ ಕೃಷ್ಣಮೂರ್ತಿ ಇದೆಲ್ಲದರ ನಡುವೆ ಅದ್ಯಾವುದೋ ಹಟದಲ್ಲಿ ಹಾಡು ಹಾಡುತ್ತಿದ್ದಾರೆ. ಅವರ ಹಾಡು ಸಹಜದ್ದು, ಯಾವುದೋ ಬಾರಿನಲ್ಲಿ, ಯಾವುದೋ ಲೈವ್‌ಶೋಗಳಲ್ಲಿ, ಯಾವುದೋ ಮತ್ತೇರಿಸುವ ಮಾದಕ ರಾತ್ರಿಕೂಟಗಳಲ್ಲಿ ಹಾಡುವಂಥದ್ದಲ್ಲ. ಅದು ಗಿಡಗಂಟಿಗಳಾ ಕೊರಳೊಳಗಿಂದ ಹಕ್ಕಿಗಳಾ ಹಾಡು, ಮಘದುಘಿಸುವಾ ಮಾಗಿದ ಮೊಗ್ಗೆ ಪಟಪಟನೆ ಒಡೆಯುವ ಹಾಡು; ಗಂಧರ್ವರಾ ಸೀಮೆಯನ್ನ ನಮ್ಮ ನಡುವೆಯೇ ಅರಳಿಸುವ ಹಾಡು. ಬಿಳಿಗೆರೆಯ ಈ ಕೃಷ್ಣಮೂರ್ತಿ ಹಾಡು ಹಾಳೆಯ ಬರಕೊಳ್ಳುವ ಹಾಡಲ್ಲವೇ ಅಲ್ಲ ಮಾರಾಯರೇ, ಇದೆಲ್ಲ ಅದರ ಕೊರಳೊಳಗಿಂದಲೇ ಉಕ್ಕಿ ಹರಿಯುವಂಥದು, ಅವರ ಕಾನ್ಸರ್ಟ್ ಕನ್ನಡದ ಕಂದಮ್ಮಗಳ ನಡುವೆ ಅನ್ನುವುದು 'ಮಕ್ಕಳ ಸಾಹಿತ್ಯ, ಮಕ್ಕಳ ಸಾಹಿತ್ಯ' ಅಂತೆಲ್ಲ ಅಂದುಕೊಳ್ಳುತ್ತಿರುವಂಥ ನಮ್ಮಗಳಿಗೆಲ್ಲ ಹೊರಳಿ ನೋಡಲೇಬೇಕೆಂದು ಕೊಳ್ಳುವಂಥದು.
©2024 Book Brahma Private Limited.