ಲೇಖಕ ಟಿ.ಜಿ. ಶ್ರೀಧರ ಅವರು ಪರಿಸರಕ್ಕೆ ಸಂಬಂಧಿಸಿದಂತೆ ಮಕ್ಕಳಿಗಾಗಿ ಬರೆದ ಲೇಖನಗಳು ಸಂಗ್ರಹ ಕೃತಿ-ಪುಟ್ಟ-ಪುಟ್ಟಿಯ ಪರಿಸರ ಕಥೆಗಳು. ಎಳೆಯ ಮಕ್ಕಳನ್ನು ಓದುಗರಾಗಿ ಎದುರಿಗೆ ಕೂರಿಸಿಕೊಂಡು ಬರೆದಿರುವ ಈ ಕಿರುಹೊತ್ತಿಗೆಯಲ್ಲಿ ಹೊಸ ಆವಿಷ್ಕಾರಗಳನ್ನು ಪರಿಚಯಿಸುವ ಹಂಬಲದಷ್ಟೇ ಪ್ರಾಕೃತಿಕ ಸಂಪರ್ಕದ ಮಹತ್ವವನ್ನು ಮನವರಿಕೆ ಮಾಡಿಕೊಡುವ ಕಾಳಜಿಯೂ ಇದೆ.
ಗೆದ್ದಲು ಹುತ್ತ, ಹಲ್ಲಿಯ ಪಾದ, ಅಂಟುಮುಳ್ಳು ಮೊದಲಾದ ನೈಸರ್ಗಿಕ ವಿಷಯಗಳು ಮಕ್ಕಳಿಗೆ ಅಚ್ಚರಿಯ ವಸ್ತುವಾಗಿರುವಂತೆ ವೈಜ್ಞಾನಿಕ ಸಂಶೋಧನೆಗಳಿಗೂ ವಸ್ತುವಾಗಿರುವುದನ್ನು ಲೇಖಕರು, ಸರಳಭಾಷೆಯಲ್ಲಿ ವಿವರಿಸಿದ್ದಾರೆ. ಬೀಚಿನಲ್ಲಿ ಪ್ರವಾಸಿಗರು ಬಿಸಾಡಿಹೋದ ಪ್ಲಾಸ್ಟಿಕ್ ಬಾಟಲುಗಳು, ಮದುವೆ ಮನೆಯ ಊಟಕ್ಕೆ ತಂದಿಟ್ಟ ಪ್ಲಾಸ್ಟಿಕ್ ಲೋಟ ಬಟ್ಟಲುಗಳು, ವಾಯುಮಾಲಿನ್ಯ, ಇ-ತ್ಯಾಜ್ಯ ಎಲ್ಲವೂ ತಾವು ಸೃಷ್ಟಿಗೊಂಡಿರುವ ಈ ಜಗತ್ತನ್ನೇ ಹೇಗೆ ನರಕವಾಗಿಸಬಲ್ಲವು ಎನ್ನುವುದನ್ನು ಮನದಟ್ಟು ಮಾಡಿಸುವ ಪ್ರಯತ್ನವೂ ಇಲ್ಲಿಯ ಬರಹಗಳಲ್ಲಿ ಕಂಡುಬರುತ್ತವೆ. ಪ್ರತಿ ಪ್ರಸಂಗದ ಕೊನೆಯಲ್ಲಿ ಕೊಟ್ಟಿರುವ ಟಿಪ್ಪಣಿ, ಅಭ್ಯಾಸ ಸೂಚಿಗಳು ಪುಸ್ತಕಕ್ಕೆ ಅಧ್ಯಯನದ ಗಾಂಭೀರ್ಯವನ್ನೂ ತಂದುಕೊಟ್ಟಿವೆ.
ಅಮ್ಮ ಹೇಳಿದರು, "ಅಡಕೆ ಹಾಳೆಯ ಬಟ್ಟಲು, ಮರದ ಚಮಚ - ಇವೆಲ್ಲ ಬಳಸೋದಕ್ಕೆ ಮಾತ್ರವೇ ಅಲ್ಲ, ನೋಡೋದಕ್ಕೂ ಚೆಂದ!" "ಬಳಸಿ ಆದಮೇಲೆ ಅದನ್ನೂ ಎಸೀಬೇಕು ತಾನೇ?" ಪುಟ್ಟಿ ಕೇಳಿದಳು. "ಅದನ್ನೆಲ್ಲ ಬೇರೆಮಾಡಿ ಒಂದುಕಡೆ ಹಾಕಿ, ಅದೆಲ್ಲ ಕೊಳೆತು ಮಣ್ಣಾಗುವುದಕ್ಕೆ ಸುಮಾರು ಸಮಯ ಬೇಕು. ಇದರ ಬದಲು ನನ್ನ ಹತ್ರ ಬೇರೆಯದೇ ಐಡಿಯಾ ಇದೆ!" "ಏನಪ್ಪಾ ಅದು ಅಂಥಾ ಐಡಿಯಾ?" ಅಮ್ಮನ ಗೆಳತಿ ಕೇಳಿದರು. "ನಿನ್ನೆ ಸಂಜೆ ಐಸ್ ಕ್ರೀಮ್ ತಿನ್ನಕ್ಕೆ ಹೋಗಿದ್ವಲ್ಲ, ಅಲ್ಲಿ ಐಸ್ ಕ್ರೀಮನ್ನು ಕೋನ್ ಒಳಗೆ ಹಾಕಿ ಕೊಟ್ಟಿದ್ರು. ಐಸ್ ಕ್ರೀಮ್ ಜೊತೆ ನಾನು ಆ ಕೋನನ್ನೂ ತಿಂದುಬಿಟ್ಟೆ. ತಿಂಡಿ ತಿನ್ನೋದಕ್ಕೂ ಅಂಥದ್ದೇ ಬಟ್ಟಲು - ಚಮಚ ಎಲ್ಲ ಇದ್ರೆ ಎಲ್ಲವನ್ನೂ ಒಟ್ಟಿಗೆ ತಿಂದು ಮುಗಿಸಿ ಎದ್ದು ಹೋಗಬಹುದು. ಕಸವೂ ಆಗಲ್ಲ, ತೊಳೆಯೋ ಯೋಚನೆಯೂ ಇಲ್ಲ!"
©2024 Book Brahma Private Limited.