ಕವಿ, ಕತೆಗಾರ ಮಹಿಪಾಲರೆಡ್ಡಿ ಮುನ್ನೂರು ಅವರು ಸೇಡಂನಲ್ಲಿ 1971ರ ನವೆಂಬರ್ 18 ರಂದು ಜನಿಸಿದರು. ಸಾಹಿತ್ಯ, ನಾಟಕ, ಪತ್ರಿಕೋದ್ಯಮ, ಸಿನಿಮಾ, ಚಿತ್ರಕಲೆ ಅವರ ಆಸಕ್ತಿಯ ಕ್ಷೇತ್ರ. ಮೂರು ಕವನ ಸಂಕಲನ, ಒಂದು ಕಥಾ ಸಂಕಲನ, ಐದು ಅಂಕಣ ಬರಹಗಳ ಸಂಕಲನ, 3 ಮಾಧ್ಯಮ ಸಂಬಂಧಿತ ಕೃತಿಗಳು, ಒಂದು ನಾಟಕ, ಒಂದು ಮಕ್ಕಳ ಕವನ ಸಂಕಲನ, ಎರಡು ಚರಿತ್ರೆ, 6 ಸಂಪಾದನೆ ಸೇರಿದಂತೆ 37 ಪುಸ್ತಕಗಳ ಪ್ರಕಟವಾಗಿವೆ.
‘ಲಕ್ಕಿ ನಂಬರ್, ಸಾಕ್ಷಿಕಲ್ಲು, ಜೋಕುಮಾರಸ್ವಾಮಿ, ಅಳಿಯ ದೇವರು, ಸಾಹೇಬರು ಬರುತ್ತಾರೆ’ ಮುಂತಾದ ನಾಟಕಗಳಲ್ಲಿ, ಮೂರು ಧಾರಾವಾಹಿಗಳಲ್ಲಿ , ಐದು ಸಿನಿಮಾ ಗಳಲ್ಲಿ, ದೂರದರ್ಶನ ನಾಟಕಗಳಲ್ಲಿ ಹಾಗೂ ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಮೈನಾಕಾಲಂ’, ‘ಅಕ್ಷರಲೋಕದ ನಕ್ಷತ್ರ’, ‘ನಗರ ನಾಯಕರು‘, ‘ಮರೆಯಲಿ ಹ್ಯಾಂಗ’, ‘ಚೀಫ್ ಗೆಸ್ಟ್’ ಮುಂತಾದ ಅಂಕಣಗಳಿಗೆ ಕರ್ತೃ. ಗುಲಬರ್ಗಾ ವಿಶ್ವ ವಿದ್ಯಾಲಯದ ದಿ.ಜಯತೀರ್ಥ ರಾಜ ಪುರೋಹಿತ ಕಥಾ ಸ್ಪರ್ಧೆಯಲ್ಲಿ ಕತೆ `ಅವಸ್ಥೆ’ಗೆ ಪ್ರಥಮ ಬಹುಮಾನ ಮತ್ತು ಚಿನ್ನದ ಪದಕ, ಮಾಧ್ಯಮ ಪ್ರಶಸ್ತಿ, ಕುವೆಂಪು ಸಾಹಿತ್ಯ ಪುರಸ್ಕಾರ, ಪಾಪು ಪುರಸ್ಕಾರ, ಹೈದ್ರಾಬಾದ್ ಕರ್ನಾಟಕ ಯುವ ಪತ್ರಕರ್ತ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿ-ಪುರಸ್ಕಾರಗಳು ಸಂದಿವೆ.