ಶಂಕರದೇವರು ಹಿರೇಮಠ ಅವರು ಜನಿಸಿದ್ದು 1985ರಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಇವರ ತಂದೆ ಕಂಬಸಯ್ಯ ಸ್ವಾಮಿ ಹಿರೇಮಠ ಮತ್ತು ತಾಯಿ ಶ್ರೀಮತಿ ಗಿರಿಜಾದೇವಿ ಹಿರೇಮಠ, ಶಂಕರದೇವರು ಹಿರೇಮಠ ಅವರು 14 ವರ್ಷದಿಂದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆಯವರು ಭಾಮಿನಿಷಟ್ನದಿಯಲ್ಲಿ ಪುರಾಣಗಳು ಸೇರಿದಂತೆ 16 ಸಾಹಿತ್ಯ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯಸೇವೆಯಲ್ಲಿ ತೊಡಗಿದ್ದಾರೆ. ತಾಯಿಯವರು ಶ್ರೀ ಶಾರದಾ ಪ್ರಕಾಶನದ ಅಡಿಯಲ್ಲಿ ಸಾಹಿತ್ಯಕೃತಿಗಳನ್ನು ಮುದ್ರಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇವರ ಶ್ರೀಮತಿ ಅಶ್ವಿನಿ ವಿಹಿರೇಮಠ ಅವರು ಬಣ್ಣದ ಬುಗುರಿ ಎಂಬ ಶಿಶುಗೀತೆಗಳ ಸಂಕಲನ ಪ್ರಕಟಿಸಿ ಮಕ್ಕಳ ಸಾಹಿತಿಯಾಗಿ ಭರವಸೆಯ ಮಹಿಳಾ ಸಾಹಿತಿಯಾಗಿದ್ದಾರೆ. ಕನ್ನಡಮ್ಮನ ಸೇವೆಯಲ್ಲಿ ತೊಡಗಿರುವ ಈ ಕುಟುಂಬ ರಾಯಚೂರು ಜಿಲ್ಲೆಯಲ್ಲಿ ವಿಶೇಷ ಸಾಧನೆ ಮಾಡಿದೆ.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ರಾಯಚೂರು ಜಿಲ್ಲಾಧ್ಯಕ್ಷರಾಗಿರುವ ಶಂಕರದೇವರು ಹಿರೇಮಠ ಅವರು 'ಗುರುವಾಣಿ' ಎಂಬ ಶಿಕ್ಷಕರ ಬರಹಗಳನ್ನು ಒಳಗೊಂಡ ತ್ರೈಮಾಸಿಕ ಪತ್ರಿಕೆ ಮತ್ತು ಮಕ್ಕಳ ಬರಹಗಳನ್ನು ಒಳಗೊಂಡ 'ಚೆಲುವ ಚಿಣ್ಣರು' ಪತ್ರಿಕೆಯನ್ನು ಹೊರತರುತ್ತಾ ಸಂಪಾದಕರಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯದಲ್ಲಿ ತೊಡಗಿರುವ ಬರಹಗಾರರನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಮಕ್ಕಳ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ವಿಭಿನ್ನ ರೀತಿಯಲ್ಲಿ ಹಮ್ಮಿಕೊಳ್ಳುತ್ತಾರೆ.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸುವರ್ಣ ಕರ್ನಾಟಕ ಕಾವ್ಯಶ್ರೀ ಪ್ರಶಸ್ತಿ, ಹಾಸನದ ಭೂಮಿ ಉಳಿಸಿ ಆಂದೋಲನದ ಭೂಮಿ ಪ್ರಶಸ್ತಿ-2018, ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಹಂಪಮ್ಮ ಶರಣೇಗೌಡ ದತ್ತಿಪ್ರಶಸ್ತಿ, ಬೆಳಗಾವಿಯ ಕಸ್ತೂರಿಸಿರಿಗನ್ನಡ ವೇದಿಕೆಯ ಸಾಹಿತ್ಯ ವಿಭೂಷಣ ಪ್ರಶಸ್ತಿ, ಮಂಡ್ಯದ ಕರುನಾಡ ಸೇವಾರತ್ನ ಪ್ರಶಸ್ತಿ, ಚುಕ್ಕಿ ಪ್ರತಿಷ್ಠಾನದ ಚುಕ್ಕಿ ಪ್ರಶಸ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳು ಇವರಿಗೆ ಒಲಿದು ಬಂದಿವೆ.
ಈಗಾಗಲೇ ಕನಸುಗಳು ಎಂಬ ಕವನಸಂಕಲನ ದೇವರಾಯ ಗ್ರಾಮದೇವತೆ ಶ್ರೀ ದುಗ್ಗಮೃದೇವಿ ಭಕ್ತಿಗೀತೆಗಳು, ಚೆಲುವಚಿಣ್ಣರು ಮಕ್ಕಳಗೀತೆಗಳು ಅಂಬರಚಂದಿರ ಶಿಶುಪ್ರಾಸಗೀತೆಗಳು ಸೇರಿದಂತೆ ಲೆಕೃತಿಗಳ ಸಂಪಾದಕರಾಗಿ ಒಟ್ಟು 13 ಕೃತಿಗಳನ್ನು ಸಾಹಿತ್ಯಲೋಕಕ್ಕೆ ಕೊಡುಗೆ ನೀಡಿದ್ದಾರೆ. ಧ್ವನಿಸುರಳಿಗಳಿಗೆ ಇವರು ಸಾಹಿತ್ಯ ರಚಿಸಿದ್ದಾರೆ. 2 ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ. ಈ ಕೃತಿ ಮಕ್ಕಳ ಬಾಳಿನ ಬೆಳಕು ಅಕ್ಷರಜ್ಯೋತಿ ಸಾವಿತ್ರಿ ಬಾಯಿಫುಲೆ ಜೀವನ ಚರಿತ್ರೆ ಸಂಕಲನವಾಗಿದೆ.