ಮೂಲತಃ ಕೃಷಿಕರಾದ ಶಿವನಾಪುರ ರಮೇಶ್, ಒಕ್ಕಲುತನದಲ್ಲಿ ಬಗೆಬಗೆಯ ಪ್ರಯೋಗ ಮಾಡಿದವರು. ಪಶುಸಂಗೋಪನೆಯಲ್ಲಿ ಪಳಗಿದವರು. ಅನುಭವದಿಂದಲೆ ರಾಸಾಯನಿಕ ಕೃಷಿಯ ಕೆಡುಕು ಮತ್ತು ಸಾವಯವ ಕೃಷಿಯ ಒಳಿತನ್ನು ಅರ್ಥಮಾಡಿಕೊಂಡವರು. ಅಲಂಕಾರಿಕ ಸಸ್ಯಗಳಿಂದ ಆರಂಭವಾಗಿ ಪ್ರವರ್ಧಮಾನಕ್ಕೆ ಬಂದ ಅವರ ತೇಜ ನರ್ಸರಿ ಈಗ ಸಾವಯವ ಸಸ್ಯಕಾಶಿ. ಸಾಟಿಯಿಲ್ಲದ ಫಲವೈವಿಧ್ಯ. ಎಲ್ಲಕ್ಕಿಂತ ಮಿಗಿಲಾಗಿ ಸಾವಿರಾರು ರೈತರ ಪಾಲಿಗೆ ರಮೇಶ್ ಸ್ಫೂರ್ತಿಯ ಚಿಲುಮೆ, ಆಪ್ತಮಿತ್ರ, ಮಾರ್ಗದರ್ಶಕ, ಹಿತಚಿಂತಕ. ಕರ್ನಾಟಕ ಮಾತ್ರವಲ್ಲದೆ ಸುತ್ತಮುತ್ತಲ ರಾಜ್ಯಗಳಲ್ಲೆಲ್ಲ ಸಾವಯವ ತೋಟಗಾರಿಕೆಯ ಬೆಳವಣಿಗೆಯಲ್ಲಿ ರಮೇಶ್ ಅವರ ಪಾತ್ರ ಮಹತ್ವದ್ದು. ಒಂದೊಂದು ಗಿಡವನ್ನು ನೀಡುವಾಗಲೂ ಅವರ ಸಾವಯವ ಪಾಠ ಇದ್ದದ್ದೇ. ಸಾವಯವ ಗಿಡಗಳ ಪೂರೈಕೆ, ಅವುಗಳ ಪೋಷಣೆ ಬಗ್ಗೆ ಮಾರ್ಗದರ್ಶನ ಮಾತ್ರವಲ್ಲದೆ ರೈತರಿಗಾಗಿ ಸಾವಯವ ತರಬೇತಿ ಕಾರ್ಯಾಗಾರಗಳನ್ನೂ ನಡೆಸುತ್ತಿದ್ದಾರೆ. ಕೃಷಿರಂಗದಲ್ಲಿನ ಹತಾಶ ಮನಸ್ಸುಗಳಿಗೆ ರಮೇಶ್ ಚೇತನಾದಾಯಿ ಶಕ್ತಿ. ಬೇಸಾಯದಿಂದ ಗಿಟ್ಟುವುದಾದರೂ ಏನು ಎಂಬ ಪ್ರಶ್ನೆಗೆ ಅವರ ಬಳಿ ಹತ್ತಾರು ಉತ್ತರ; ನೂರಾರು ದೃಷ್ಟಾಂತ. ಮಹಾತ್ಮ ಗಾಂಧಿ ಅವರ ಮನಗೆದ್ದಿದ್ದ ದೇವನಹಳ್ಳಿಯ ವಿಶಿಷ್ಟ ಚಕ್ಕೋತ ತಳಿಯ ಉಳಿವು-ಬೆಳವಣಿಗೆಯಲ್ಲಿ ರಮೇಶ್ ಮುತುವರ್ಜಿಯಿಂದ ಕೆಲಸ ಮಾಡಿದ್ದರಿಂದ, ಅದಕ್ಕೆ ಭೌಗೋಳಿಕ ಸೂಚ್ಯಂಕ (ಜಿಐ) ಪ್ರಾಪ್ತವಾಯಿತು.
ಬೆಂಗಳೂರು ಹೊರವಲಯದ ದೇವನಹಳ್ಳಿಯ ತೇಜ ನರ್ಸರಿಯಲ್ಲಿ ಕಾಲಿಟ್ಟರೆ ಒಂದೆಡೆ ರೈತರು ತಮಗೆ ಬೇಕಾದ ಗಿಡಗಳ ಆಯ್ಕೆಯಲ್ಲಿ ಹಾಗೂ ಇನ್ನೊಂದೆಡೆ ನರ್ಸರಿಯ ಮಾಲಿಕ ಶಿವನಾಪುರ ರಮೇಶ್ ಸಾವಯವ ಕೃಷಿಯ ಮೂಲಸೂತ್ರಗಳನ್ನು ಎಳೆಎಳೆಯಾಗಿ ವಿವರಿಸುತ್ತಿರುವುದು ಕಂಡುಬರುತ್ತದೆ.
ಈ ಪುಸ್ತಕ ಶಿವನಾಪುರ ರಮೇಶ್ ಅವರ ವ್ಯಕ್ತಿಚಿತ್ರಣದ ಜತೆಗೆ ಸಾವಯವ ಕೃಷಿ ಮಾಡಬಯಸುವವರಿಗೆ ಅವರು ನೀಡುವ ಕಿವಿಮಾತುಗಳನ್ನು ಸಾದರಪಡಿಸುತ್ತದೆ.
©2024 Book Brahma Private Limited.