ಲೇಖಕ ನರೇಂದ್ರ ರೈ ದೇರ್ಲ ಅವರು ಡಾ. ಡಿ.ಸಿ.ಚೌಟ ಅವರ ಕೃಷಿ ತೋಟದ ಬಗ್ಗೆ ಬರೆದ ಕೃತಿಯಾಗಿದೆ. 'ಚೌಟರ ತೋಟ' -ಕರ್ನಾಟಕ ಕೃಷಿ ಕಥನ ಮಾಲಿಕೆಯಲ್ಲಿ ಎರಡನೆಯ ಪುಸ್ತಕ .ಕೃಷಿಕ ಲೇಖಕ ಡಾ. ನರೇಂದ್ರ ರೈ ದೇರ್ಲ ಅವರು ರಾಜ್ಯದ ಆಯ್ದ ಕೃಷಿಕರ ತೋಟಕ್ಕೆ ಹೋಗಿ ತಾವೇ ಅಗೆದು ಬಗೆದು ಸಂದರ್ಶಿಸಿ ಬರೆಯುತ್ತಿರುವ ಸರಣಿ ಪುಸ್ತಕ ಮಾಲಿಕೆಯ ಎರಡನೆಯ ಪುಸ್ತಕವಿದು . ಕನ್ನಡ- ತುಳು ಭಾಷೆಯ ಪ್ರಮುಖ ಲೇಖಕ ನಾಟಕಕಾರ ದಿ. ಡಿ.ಕೆ ಚೌಟರ ಸಹೋದರ ಡಾ. ಚಂದ್ರಶೇಖರ್ ಚೌಡರ ತೋಟ ಇರುವುದು ಕೇರಳ ಕರ್ನಾಟಕ ಗಡಿಭಾಗದ ಮಿಯ ಪದವಿನಲ್ಲಿ. ಅವಕಡೊ ರಂಬುಟನ್ ಡ್ರ್ಯಾಗನ್ ಇಂಥ ಅಪರೂಪದ ಹಣ್ಣು ಹಂಪಲಿನ ಈ ಕೃಷಿ ಆವಾರ ಒಂದು ಪ್ರಯೋಗ ಶೀಲ ನೆಲೆಯೂ ಹೌದು. ಸಸ್ಯ ಶಾಸ್ತ್ರದ ವಿದ್ಯಾರ್ಥಿಯಾಗಿ ದೇಶ ವಿದೇಶಗಳನ್ನು ಸುತ್ತಾಡಿದ ಚಂದ್ರಶೇಖರ್ ಚೌಟರದು ಈಗಲೂ ಕೂಡುಕುಟುಂಬ. ಸಹೋದರರೆಲ್ಲ ಒಂದೇ ಮನೆಯಲ್ಲಿದ್ದು ಕೃಷಿಯನ್ನು ಪ್ರೀತಿಸಿ ನಿಭಾಯಿಸಿ ಆದಾಯವನ್ನು ಹಂಚಿಕೊಳ್ಳುತ್ತಾರೆ. ಕರಾವಳಿ ಭಾಗದಲ್ಲಿ ಎಳೆನೀರನ್ನು ಸುಮಾರು 30 ವರ್ಷಗಳ ಹಿಂದೆಯೇ ರಸ್ತೆ ಬದಿಯಲ್ಲಿಟ್ಟು ಮಾರುಕಟ್ಟೆ ಕಂಡುಕೊಂಡು ಅದು ರಾಜ್ಯದಾದ್ಯಂತ ವಿಸ್ತರಿಸಲು ಕಾರಣರಾದವರು ಇದೇ ಚೌಟರು. ಇವರ ಮನೆಯಲ್ಲಿ ದೇಶದ ಮೊದಲ ಮಾವುತೆ ಇದ್ದಾಳೆ. ಇದೇ ಮನೆಯಲ್ಲಿ ಶ್ರೇಷ್ಠ ಸಂಗೀತ ನಿರ್ದೇಶಕರಿದ್ದಾರೆ .ಲೇಖಕರಿದ್ದಾರೆ. ಇಂಥ ಅಪರೂಪದ ಕೃಷಿ ಕುಟುಂಬ ಒಂದರ ಕೃಷಿಕತನವೇ ಚೌಟರ ತೋಟ..
©2024 Book Brahma Private Limited.