ಹವ್ಯಾಸಿ ಪತ್ರಕರ್ತೆ. ಪಿಯುಸಿ ನಂತರ ಹಿಂದಿ ಶಿಕ್ಷಕ ತರಬೇತಿ ಪಡೆದು ಗೃಹಶೋಭಾ ಪತ್ರಿಕೆಯಲ್ಲಿ ಉದ್ಯೋಗ. ಜತೆಯಲ್ಲೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಪದವಿ, ಹಿಂದಿ ಅನುವಾದದಲ್ಲಿ ಸ್ನಾತಕೋತ್ತರ ಡಿಪ್ಲೋಮಾ, ಕೃಷಿ ಬರಹದಲ್ಲಿ ಆಸಕ್ತಿ. ಕೃಷಿಯಲ್ಲಿ ಮಹಿಳೆ, ಕೈತೋಟ, ಹೂಮರಗಳು, ತಾರಸಿ ತೋಟಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯಲು ಆದ್ಯತೆ. 11 ವರ್ಷಗಳ ನಂತರ ಉದ್ಯೋಗಕ್ಕೆ ವಿದಾಯ. ಮನೆಯಿಂದಲೇ ವಿವಿಧ ಪ್ರಕಾಶನಗಳಿಗೆ ಹಿಂದಿ-ಕನ್ನಡ ಅನುವಾದಕಿಯಾಗಿ ಕೆಲಸ. 20ಕ್ಕೂ ಹೆಚ್ಚು ಪುಸ್ತಕಗಳು, ನೂರಾರು ಲೇಖನಗಳ ಅನುವಾದ ಕಾರ್ಯ. ಉಷಾಕಿರಣ ಪತ್ರಿಕೆಯಲ್ಲಿ ಮಹಿಳಾ ಪುಟಕ್ಕೆ ಅಂಕಣ. ಕೃಷಿ ಮಾಧ್ಯಮ ಕೇಂದ್ರದಿಂದ 2005-06ರಲ್ಲಿ ‘ಕೃಷಿ ಮತ್ತು ಗ್ರಾಮೀಣ ಪತ್ರಿಕೋದ್ಯಮ’ ತರಬೇತಿ ಪಡೆದ ನಂತರ, ಕೃಷಿಗೆ ಸಂಬಂಧಿಸಿದ ಬರಹಗಳಿಗೆ ಒತ್ತು. ತರಬೇತಿಯ ಭಾಗವಾಗಿ ಸಿದ್ಧಪಡಿಸಿದ ಅಧ್ಯಯನ ಪ್ರಬಂಧ ‘ಸಹಜ ಸಮೃದ್ಧ ಸಾಗಿ ಬಂದ ಹಾದಿ’ ಶೀರ್ಷಿಕೆಯ ಪುಸ್ತಕ ರೂಪದಲ್ಲಿ ಪ್ರಕಟ. ಕೃಷಿ ಲೇಖನಗಳ ಜಾಡಿನಲ್ಲಿ ಅನೇಕ ಅಧ್ಯಯನ ಪ್ರವಾಸ. ಅಡಿಕೆ ಪತ್ರಿಕೆ, ಸಹಜ ಸಾಗುವಳಿ, ಜಲಸಿರಿ, ಸಿರಿ ಸಮೃದ್ಧಿ, ಕನ್ನಡ ವಿವಿಧ ಮಾಸ ಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಲೇಖನಗಳು ಪ್ರಕಟ. ದೇಸಿ ಬೀಜ, ವಿಶಿಷ್ಟ ಹಣ್ಣಿನ ತಳಿಗಳು, ಹಲಸು, ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆ ಆಸಕ್ತಿಯ ವಿಷಯಗಳು.