ಪಿ. ನಾರಾಯಣಸ್ವಾಮಿ ಹಾಗೂ ಸುರೆಶ್ ಡಿ. ಏಕಬೋಟೆ ಅವರ ಕೃಷಿ ಸಂಬಂಧಿ ಕೃತಿ ʻದಾಳಿಂಬೆ ಕೃಷಿʼ. ದಾಳಿಂಬೆ ಭಾರತದಲ್ಲಿ ಬೆಳೆಯುವ ಪ್ರಮುಖ ಹಣ್ಣಿನ ಬೆಳೆಗಳಲ್ಲಿ ಒಂದು. ಅದರ ಕೃಷಿ ಮಾಡಿ ಉತ್ತಮ ಲಾಭ ಗಳಿಸಬೇಕು ಎಂಬ ಹಂಬಲವಿದ್ದು, ಆ ಕುರಿತಾಗಿ ಸರಿಯಾದ ಮಾಹಿತಿ ಸಿಗದಿರುವ ಅನೇಕ ರೈತರಿಗೆ ಈ ಪುಸ್ತಕ ಮಾರ್ಗದರ್ಶಿಯಾಗಲಿದೆ. ದಾಳಿಂಬೆಯಿಂದ ಅಷ್ಟೊಂದು ಲಾಭ ಸಿಗದ ಕಾರಣ ವಿಫಲರಾಗಿ ನಷ್ಟ ಅನುಭವಿಸುವ ರೈತರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದಾಳಿಂಬೆ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖಕರು ಇಲ್ಲಿ ನೀಡಿದ್ದಾರೆ. ಪುಸ್ತಕದ ಬಗ್ಗೆ ಲೇಖಕರು ಹೇಳುವಂತೆ, ಸ್ಥಳೀಯ ಮಾರುಕಟ್ಟೆಯಲ್ಲೇ ದಾಳಿಂಬೆಗೆ ಹೆಚ್ಚಿನ ಬೇಡಿಕೆ ಇರುವುದರಿಂದ ರಫ್ತು ಪ್ರಮಾಣ ಇನ್ನೂ ಕಡಿಮೆ ಇದೆ. ದಾಳಿಂಬೆ ಬೇಸಾಯ ಲಾಭದಾಯಕ ಆಗಬೇಕಾದರೆ ಹಣ್ಣಿನ ಗುಣಮಟ್ಟ ಮತ್ತು ಉತ್ಪಾದನೆ ಹೆಚ್ಚಾಗಿ ಉತ್ಪಾದನಾ ವೆಚ್ಚ ಕಡಿಮೆಯಾಗಬೇಕು. ಕೆನಡಾ, ಅಮೇರಿಕಾ, ದಕ್ಷಿಣ ಅಮೇರಿಕಾದ ರಾಷ್ಟ್ರಗಳು, ಏಷ್ಯಾದ ಆಗ್ನಿಯ ರಾಷ್ಟ್ರಗಳು, ಆಸ್ಟ್ರೇಲಿಯಾ ಜಪಾನ್, ಕೊರಿಯಾ ಮತ್ತಿತರ ರಾಷ್ಟ್ರಗಳಿಗೆ ರಫ್ತು ಮಾಡುವ ಪ್ರಯತ್ನ ಮಾಡಬೇಕಾಗಿದೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಂದ ರಫ್ತು ಮಾಡಲು ಪೂರ್ವಕರಾವಳಿಯಲ್ಲಿರುವ ಬಂದರುಗಳು ನೆರವು ನೀಡಬೇಕಾಗಿದೆ. ನೀರಿನ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆ ಬೇಕಾಗಿರುವುದರಿಂದ ಇದು ರೈತರಿಗೆ ಒಳ್ಳೆ ಬೆಳೆ ಎನ್ನಿಸಿದೆ. ರೋಗನಿರೋಧಕ ತಳಿಗಳ ಅಭಿವೃದ್ಧಿ ಮಾಡಿ ಭಾರತದಿಂದ ರಫ್ತು ಪ್ರಮಾಣವನ್ನು ಹೆಚ್ಚಿಸಿದಲ್ಲಿ ಅನೇಕ ಒಣಪ್ರದೇಶಗಳ ರೈತರಿಗೆ ಉತ್ತಮ ಆದಾಯ ತರಲು ಒಂದು ವರದಾನವಾಗಬಲ್ಲದು.
©2024 Book Brahma Private Limited.