ಇಲ್ಲಿ ಬೇಸಾಯದ ಬಗ್ಗೆ ಲೇಖಕರು ದೂರದಿಂದ ಕಂಡು ಬರೆದಿಲ್ಲ. ಅದರ ಒಂದು ಭಾಗವಾಗಿಯೇ ಬರೆಯುತ್ತಾ ಹೋಗುತ್ತಾರೆ. ಸ್ವಯಂ ಕೃಷಿಗಿಳಿಯುತ್ತಾ ಅದರ ಲಾಭ ನಷ್ಟಗಳನ್ನು ಒಂದೆಡೆ ಹೇಳುತ್ತಾರೆ. ಹಾಗೆಯೇ ಕೃಷಿ ಬದುಕಿನ ಜೊತೆಗೆ ಸುತ್ತಿಕೊಂಡಿರುವ ಬೇರೆ ಬೇರೆ ಹಬ್ಬ, ಉತ್ಸವ ಇತ್ಯಾದಿಗಳನ್ನು ವಿವರಿಸುತ್ತಾರೆ. ಹಾಗೆಯೇ ಕೃಷಿಯ ಜೊತೆಗೆ ಅಂಟಿಕೊಂಡ ಸಂಬಂಧಗಳನ್ನೂ ತೆರದಿಡುವ ಪ್ರಯತ್ನ ಮಾಡುತ್ತಾರೆ. ಅಂದರೆ ಬೇಸಾಯದ ಬೇರೆ ಬೇರೆ ಮಗ್ಗುಲುಗಳು ಲೇಖಕರಿಂದ ಪರಿಚಯವಾಗುತ್ತಾ ಹೋಗುತ್ತದೆ. ಇದೇ ಸಂದರ್ಭದಲ್ಲಿ ನಾವಿಂದು ಯಾವ ಹಬ್ಬ ಹರಿದಿನ, ಉತ್ಸವಗಳನ್ನು ಆಚರಿಸುತ್ತಿದ್ದೇವೆಯೋ ಅವೆಲ್ಲವೂ ಬೇಸಾಯದಿಂದ ತನ್ನ ನಂಟನ್ನು ಕಳೆದುಕೊಂಡು ಸ್ವತಂತ್ರವಾಗುತ್ತಿರುವುದು, ಮತ್ತು ಕೃತಕ ಆಚರಣೆಯಾಗಿ ಮುಂದುವರಿಯುತ್ತಿರುವುದನ್ನೂ ಕೃತಿಯು ಚರ್ಚಿಸುತ್ತದೆ. ಶ್ರಾವಣದಿಂದ ಮಹಾನವಮಿಯವರೆಗಿನ ಹಬ್ಬಗಳಲ್ಲಿ ಮಣ್ಣನ್ನು ಪೂಜಿಸುವಂಥವೇ. ಮಣ್ಣೆತ್ತಿನ ಅಮವಾಸೆಗೆ ಮಣ್ಣೆತ್ತು ಮಾಡಿ ಪೂಜಿಸುವುದು. ನಾಗರ ಪಂಚಮಿಗೆ ಹುತ್ತಕ್ಕೆ ಹಾಲೆರೆಯುವುದು. ಗಣಪ ಕೂಡ ಮಣ್ಣೆ. ನಮ್ಮ ಅಡುಗೆ, ಉಡುಗೆ, ತೊಡುಗೆಗಳಿಗೆ ಬೇಕಾದ ಮೂಲ ಪದಾರ್ಥ, ಪರಿಕರಗಳನ್ನು ಒದಗಿಸುವ ಮಣ್ಣನ್ನು ಪೂಜಿಸುವ, ಮಣ್ಣಿನ ಋಣಕ್ಕೆ ಕೃತಜ್ಞತೆ ಸಲ್ಲಿಸುವ ಅರ್ಥಪೂರ್ಣ ಆಚರಣೆ. ಇಂತಹ ಹಲವು ಚಿಂತನೆಗಳು ಈ ಕೃತಿಯಲ್ಲಿದೆ.
©2025 Book Brahma Private Limited.