ಹಿರಿಯ ಪತ್ರಕರ್ತ, ‘ಅಡಿಕೆ ಪತ್ರಿಕೆ’ಯ ಸಂಪಾದಕ ಶ್ರೀ ಪಡ್ರೆ ಅವರು ಹಲಸು ಭವಿಷ್ಯದ ಬೆಳೆ ಎಂದು ಘಂಟಾಘೋಷವಾಗಿ ಹೇಳುತ್ತ, ಇದಕ್ಕೆ ಪುರಾವೆ ಎಂಬಂತೆ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಮಾತ್ರವಲ್ಲ, ದೇಶದ ಉದ್ದಗಲ, ಜಗತ್ತಿನ ಮೂಲೆಮೂಲೆಯಿಂದ ದೃಷ್ಟಾಂತಗಳನ್ನು ಹೆಕ್ಕಿತೆಗೆದು, ತಮ್ಮ ಲೇಖನಗಳ ಮೂಲಕ ಸಾದರಪಡಿಸುತ್ತ ಬಂದಿದ್ದಾರೆ.
ಹಲಸಿನ ಮಾನವರ್ಧನೆಯನ್ನು ಸ್ವಯಂ ಸವಾಲಿನಂತೆ ಸ್ವೀಕರಿಸಿರುವ ಅವರು, ಈ ಉದ್ದೇಶ ಸಾಧನೆಗಾಗಿ ಮಾಡದ ಕೆಲಸವಿಲ್ಲ. ಆಸಕ್ತರಿಗೆ ಮಾಹಿತಿ, ಬೆಳೆಯುವವರಿಗೆ ಪ್ರೋತ್ಸಾಹ, ಅನುಶೋಧಕರಿಗೆ ಉತ್ತೇಜನ, ಉದ್ಯಮಿಗಳಿಗೆ ಬೆಂಬಲ, ವಿಜ್ಞಾನಿ-ತಜ್ಞರಿಗೆ ಕ್ಷೇತ್ರಮಟ್ಟದ ವಿವರ, ಸಂಸ್ಥೆ-ಸಂಘಟನೆಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.
"ಕಳೆದುಕೊಂಡ ಹಲಸಿನ ಅತಿ ವಿಶೇಷ ತಳಿಗಳ ಬಗ್ಗೆ ಚಿಂತಿಸುವ ಬದಲು ಇರುವುದರಲ್ಲಿ ಶ್ರೇಷ್ಠವಾದದ್ದರ ಆಯ್ಕೆ ಈಗಿನ ಅಗತ್ಯ" ಎನ್ನುವ ಶ್ರೀ ಪಡ್ರೆ, "ನಮ್ಮ ಮನೆ, ಸಭೆ-ಸಮಾರಂಭ, ವಿವಾಹ, ಹೊಟೇಲು ಎಲ್ಲೆಡೆ ಹಲಸಿನ ಬಳಕೆ ಹೆಚ್ಚಬೇಕು" ಎನ್ನುತ್ತಾರೆ. ಹಲಸು ಕ್ಷೇತ್ರಕ್ಕೆ ಸಂಬಂಧಿಸಿದ ಹತ್ತಾರು ಸಂಗತಿಗಳ ಮೇಲೆ ಈ ಪುಸ್ತಕದಲ್ಲಿ ಅವರು ಬೆಳಕು ಚೆಲ್ಲಿದ್ದಾರೆ. ಆಕರ್ಷಕ ವರ್ಣಚಿತ್ರಗಳನ್ನೂ ಪುಸ್ತಕ ಒಳಗೊಂಡಿದೆ. ಪುಸ್ತಕದ ಬೆನ್ನುಡಿಯಲ್ಲಿ ಹಿರಿಯ ಲೇಖಕ ಡಾ. ನರೇಂದ್ರ ರೈ ಹೇಳುತ್ತಾರೆ: "ಸಾಮಾನ್ಯ ಹಣ್ಣೊಂದನ್ನು ಜಾಗತಿಕ ಮನ್ನಣೆಗೆ ತರುವುದು ಸಾಮಾನ್ಯ ವಿಷಯವಲ್ಲ. ಬರಹಗಾರನಿಗೆ ವಿಷಯ ಸಂಬಂಧಿ ನೈತಿಕ ವಾರಸುದಾರಿಕೆ ಇದ್ದಾಗ ಬರವಣಿಗೆಯೇ ಚಳವಳಿಯಾಗುತ್ತದೆ. ಪಡ್ರೆಯವರ ಆಲೋಚನೆ ಪತ್ರಿಕೆಯ ಪುಟ ಮೀರುವುದು ಅವರೊಳಗಡೆಯ ಮಾನಸಿಕ ಪಠ್ಯದೊಳಗೆ. ಕಾಲಬುಡದ ಕಸವನ್ನು ತಲೆ-ಹೆಗಲಿಗೇರಿಸಿ ಗೆಲ್ಲುವ ದಾರಿಯಲ್ಲಿ ಅವರು ಮುಕ್ಕಾಲು ದೂರ ಬಂದಿದ್ದಾರೆ. ಫಲಿತಾಂಶದ ನೂಲು ಮುಟ್ಟೇ ಮುಟ್ಟುತ್ತಾರೆ ಎಂಬ ನಂಬಿಕೆ ನನ್ನದು."
©2024 Book Brahma Private Limited.