ಲೇಖಕ ಆನಂದತೀರ್ಥ ಪ್ಯಾಟಿ ಅವರ ಅನುವಾದಿತ ಕೃತಿ ʻಬೀಜದ ನಂಟುʼ. ಮೂಲ ಕೃತಿಯ ಲೇಖಕಿ ದೀಪಿಕಾ ಕುಂದಾಜೆ ಅವರು ಬರೆದ ತರಕಾರಿ ಬೀಜೋತ್ಪಾದಕರ ಕೈಪಿಡಿ ಈ ಪುಸ್ತಕ. ರಾಸಾಯನಿಕ ಕೃಷಿ ಕ್ರಮೇಣ ಮಣ್ಣಿನ ಫಲವತ್ತತೆಯನ್ನು ನುಂಗಿಹಾಕಿ ವಿಷಭರಿತ ಫಸಲನ್ನು ನೀಡುತ್ತ ಮನುಷ್ಯನ ಆರೋಗ್ಯವನ್ನೂ, ಮಾನಸಿಕ ನೆಮ್ಮದಿಯನ್ನೂ ಹಿಂಡತೊಡಗಿದಾಗ ಅನೇಕರು ಸಾವಯವದ ಹಾದಿ ಹಿಡಿದು ಮಣ್ಣಿಗೂ ಮನಸ್ಸಿಗೂ ಹಿತವೆನಿಸುವ ರೀತಿಯಲ್ಲಿ ಹೆಜ್ಜೆಹಾಕತೊಡಗಿದ್ದಾರೆ. ವಾಣಿಜ್ಯೇತರ ಬೆಳೆಗಳ ತಳಿ ಸಂರಕ್ಷಣೆ ಹಾಗೂ ಪಾಳುನೆಲದಲ್ಲೂ ಕೈತೋಟ ಮಾಡಿ ಅವುಗಳನ್ನು ಹೇಗೆ ಬೆಳೆಸಬಹುದು ಎಂಬುದನ್ನು ಲೇಖಕರು ಈ ಪುಸ್ತಕದ ಮೂಲಕ ಆಸಕ್ತರಿಗೆ ಕಲಿಸುತ್ತಿದ್ದಾರೆ. ಸ್ಥಳೀಯ ಜ್ಞಾನ-ಕೌಶಲ, ಅಲ್ಲೇ ಸಿಗುವ ಒಳಸುರಿ ಹಾಗೂ ಸಸ್ಯಗಳ ಬಳಕೆಯಂಥ ಸರಳ ವಿಧಾನಗಳ ಮೂಲಕ ಮಣ್ಣು ಸುಧಾರಣೆಯಾಗಬಲ್ಲದು ಎಂಬುದನ್ನು ಮನವರಿಕೆ ಮಾಡಲಾಗಿದೆ. “ಎಲ್ಲಕ್ಕಿಂತ ಮುಖ್ಯವಾಗಿ ಬೇಕಾದ ‘ಉನ್ನತ ತಂತ್ರಜ್ಞಾನ’ ಅಂದರೆ ನೆಲದೆಡೆಗಿನ ಪ್ರೀತಿ ಹಾಗೂ ಮಮತೆ. 'ಹಳೆಯ ತಳಿಗಳನ್ನು ಈಗಿನ ತಂತ್ರಗಳಿಂದ ಉಳಿಸಿಕೊಳ್ಳುವುದು ಮತ್ತು ಮುಂದಿನ ಪೀಳಿಗೆಗೆ ಕೊಡುವುದು ಹೆಚ್ಚು ಆದ್ಯತೆಯ ಕೆಲಸವಾಗಬೇಕಿದೆ. ರೈತರ ಹೊಲದಲ್ಲಿ ಜನ್ಮ ತಳೆದ ತಳಿಗಳು ಬಹುರಾಷ್ಟ್ರೀಯ ಕಂಪನಿಗಳ ವಶವಾಗದೆ ಮತ್ತೆ ರೈತರ ಕೈಗಳಿಗೆ ಹೋಗಬೇಕಿದೆ” ಎನ್ನುತ್ತಾರೆ ದೀಪಿಕಾ. ಈ ಪುಸ್ತಕದಲ್ಲಿ ಅವರು ವಿವಿಧ ತರಕಾರಿಗಳಲ್ಲಿ ತಳಿ ಶುದ್ಧತೆಯನ್ನು ಕಾಪಾಡಿಕೊಳ್ಳುತ್ತ ಬೀಜೋತ್ಪಾದನೆ ಮಾಡುವ ವಿಧಾನವನ್ನು ತಿಳಿಸಿಕೊಟ್ಟಿದ್ದಾರೆ ಜೊತೆಗೆ, ಬೀಜ ಶುದ್ಧಗೊಳಿಸುವ ಕ್ರಮ, ಸಂಗ್ರಹಣಾ ವಿಧಾನ ಹಾಗೂ ಮೊಳಕೆ ಸಾಮರ್ಥ್ಯ ಪರೀಕ್ಷೆ ಹೀಗೆ ಬೀಜಕ್ಕೆ ಸಂಬಂಧಪಟ್ಟ ಹಲವಾರು ಮಾಹಿತಿಗಳ ಬಂಡಾರವೇ ಈ ಪುಸ್ತಕ.
©2024 Book Brahma Private Limited.