ರಾಜಸ್ಥಾನದ ನಾಂಡುವಾಲಿ ನದಿ ಒಂದೊಮ್ಮೆ ಪೂರ್ತಿ ಬತ್ತಿ ಹೋಗಿತ್ತು. ಈ ನದಿಯನ್ನು ಊರ ಮಂದಿ ಐದೇ ವರ್ಷದಲ್ಲಿ ಪುನಃ ಹರಿಯುವಂತೆ ಮಾಡಿದ್ದಾರೆ. ಅದೇ ರಾಜ್ಯದ ಲಾಪೋಡಿಯಾದಲ್ಲಿ ವಾರ್ಷಿಕ ಮಳೆ 300 ಮಿ.ಮೀ. ಆಸುಪಾಸಿನಲ್ಲಿದ್ದರೂ ಅಲ್ಲಿನ ಜನತೆ ಹತಾಶರಾಗಿಲ್ಲ. ಮಹಾರಾಷ್ಟ್ರದಲ್ಲಿ ಪಾನಿ ಫೌಂಡೇಶನ್ನಿನ ಮುಂದಾಳತ್ವದಲ್ಲಿ ಸಾವಿರಕ್ಕೂ ಹೆಚ್ಚು ಗ್ರಾಮಗಳು ಬರ ವಿಮುಕ್ತಿಯತ್ತ ದಿಟ್ಟ ಹೆಜ್ಜೆ ಇಟ್ಟಿವೆ.
ಕೇರಳದ ತ್ರಿಶೂರು ಜಿಲ್ಲೆಯಲ್ಲಿ ಸರಕಾರಿ ವ್ಯವಸ್ಥೆಯಡಿ ರೂಪುಗೊಂಡು ಕಳೆದೊಂದು ದಶಕದಿಂದ ಕೆಲಸಮಾಡುತ್ತಿರುವ ‘ಮಳಪೊಳಿಮ’ ಅಭಿಯಾನದಡಿ ತೆರೆದ ಬಾವಿಗಳಿಗೆ ಸೂರಿನ ನೀರು ತುಂಬಿ ಬಾವಿ ನೀರು ಹೆಚ್ಚಿಸುವ ಸರಳ ವಿಧಾನ ತುಂಬ ಜನಪ್ರಿಯವಾಗಿದೆ. ಅದೇ ರಾಜ್ಯದ ಕೊಡುಂಗರಪಳ್ಳಮ್ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ನದಿ ಪುನರ್ಜನ್ಮ ಹಿರಿಮೆಗೆ ಪಾತ್ರವಾಗಿದೆ. ‘ಮೃತ ನದಿ’ ಎಂದೇ ಕರೆಸಿಕೊಳ್ಳುತ್ತಿದ್ದ ವರಟ್ಟಾರ್ ನದಿ ಈಗ ಮತ್ತೆ ಹರಿಯತೊಡಗಿದೆ.
ಕರ್ನಾಟಕದ ಹುನಗುಂದದ ನಾಗರಾಳ ಕುಟುಂಬದ ಮೂರು ತಲೆಮಾರುಗಳು ಪಾಲಿಸುತ್ತ ಬಂದಿರುವ ಮಣ್ಣಿನ ಸವಕಳಿ ನಿಲ್ಲಿಸಿ, ಹಸಿ ಉಳಿಸುವ ತಂತ್ರಗಾರಿಕೆ ಸಾವಿರಾರು ಕುಟುಂಬಗಳಿಗೆ ಜೀವನ ಭದ್ರತೆ ಕಲ್ಪಿಸಿದೆ. ಬೆಳಗಾವಿ ನಗರ ಮಹಾಪಾಲಿಕೆ ನೂರಕ್ಕೂ ಹೆಚ್ಚು ಬಾವಿಗಳು ಹಾಗೂ ಹತ್ತು ಕೊಳಗಳ ಪುನರುಜ್ಜೀವನ ನಡೆಸಿರುವುದು ನೀರ ಕೊರತೆಯನ್ನು ಬಹುಮಟ್ಟಿಗೆ ನೀಗಿಸಿದೆ. ಇಂತಹ ಹತ್ತಾರು ನಿದರ್ಶನಗಳನ್ನು ಈ ಪುಸ್ತಕ ಪರಿಣಾಮಕಾರಿಯಾಗಿ ಬಿಂಬಿಸುತ್ತದೆ.
ಲೇಖಕ ಶ್ರೀ ಪಡ್ರೆ ಹೇಳುವಂತೆ, "ಈ ದೇಶದಲ್ಲಿ ಬರ ಎಷ್ಟಿದೆಯೋ, ಅದಕ್ಕೂ ಹೆಚ್ಚು ಇದೆ ಆತ್ಮವಿಶ್ವಾಸದ ಬರ. ದೂರದೃಷ್ಟಿಯ ಬರ. ಸಾಮುದಾಯಿಕ ಇಚ್ಛಾಶಕ್ತಿಯ ಬರ. ಗ್ರಾಮೀಣ ನಾಯಕತ್ವದ ಬರ. ನೀರಿನ ಬಗ್ಗೆ ಬೆಳೆಸಿಕೊಂಡ ಹತ್ತು ಹಲವು ತಪ್ಪುಕಲ್ಪನೆಗಳು ಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿವೆ. ಈ ದೇಶದ ಬೇರೆಬೇರೆ ಪ್ರದೇಶಗಳಿಗೆ ಹೊಂದುವ ಸಿದ್ಧ ಜಲಸಮೃದ್ಧಿಯ, ಕಾಡುಬೆಳೆಸುವ ವಿದ್ಯಾವೈವಿಧ್ಯವಿದೆ. ಬರನಿರೋಧಕ ಜಾಣ್ಮೆಗಳಿವೆ. ಇಲ್ಲದಿರುವುದು ದೃಢ ಮನಸ್ಸು, ಸಂಕಲ್ಪ." ಊರ ಅಭಿವೃದ್ಧಿಗಾಗಿ ಒಗ್ಗೂಡಿ ನೆಲ-ಜಲದ ಸ್ಥಿತಿಯಲ್ಲಿ ಅದ್ಭುತ ಬದಲಾವಣೆ ತಂದ ಸಮುದಾಯಗಳ ಕಥೆ, ಸಾಧ್ಯತೆಯ ಕ್ಯಾಪ್ಸೂಲುಗಳು ಈ ಕೃತಿಯಲ್ಲಿವೆ.
©2024 Book Brahma Private Limited.