ಬೆಳಗಾವಿ ಜಿಲ್ಲೆಯ ಅನ್ನದ ಬಟ್ಟಲು ಖಾನಾಪೂರ ಅನೇಕ ದೇಸಿ ಭತ್ತದ ತಳಿಗಳಿಗೆ ತವರು. ಹಸಿರು ಕ್ರಾಂತಿಯ ನಂತರದ ವರ್ಷಗಳಲ್ಲಿ ಈ ತಳಿಗಳು ಕಣ್ಮರೆಯಾಗಿದ್ದವು. ಈ ತಾಲೂಕಿನ ಪುಟ್ಟ ಗ್ರಾಮ ಗುಂಡೇನಟ್ಟಿಯಲ್ಲಿಯೂ ಇದೇ ಪರಿಸ್ಥಿತಿ. ಶತಮಾನದ ಆರಂಭದಲ್ಲಿ ಕಾಣಿಸಿಕೊಂಡ ಮೂರು ವರ್ಷ ಸತತ ಬರವನ್ನು ಎದುರಿಸಲು ಗಿಡ್ಡನೆಯ, ಅಧಿಕ ಇಳುವರಿಯ ಭತ್ತದ ತಳಿಗಳು ಅಸಮರ್ಥವಾದವು. ಪ್ರತಿಕೂಲ ವಾತಾವರಣದಲ್ಲೂ ಫಸಲು ನೀಡುವ ತಳಿಗಳು ಹೊಲದಿಂದ ಕಣ್ಮರೆಯಾಗಿದ್ದವು. 2000ದ ಹೊತ್ತಿಗೆ ಹಳ್ಳಿಯಲ್ಲಿ ಮೂರು-ನಾಲ್ಕು ತಳಿಗಳಷ್ಟೇ ಉಳಿದಿದ್ದವು. ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಹಾಗೂ ಹೊಸ ತಳಿಗಳ ಆಗಮನ ಈ ಪ್ರದೇಶದ ಕೃಷಿ ಮಾದರಿಯನ್ನೇ ಬದಲಾಯಿಸಿತ್ತು.
ಕೃಷಿಕರು ಹತ್ತಿ, ಗೋವಿನ ಜೋಳ ಮುಂತಾದ ಆರ್ಥಿಕ ಬೆಳೆಗಳನ್ನು ಬೆಳೆಯಲು ಪ್ರಯತ್ನಿಸಿದರೂ ಯಾವ ಬೆಳೆಯೂ ಗಟ್ಟಿಯಾಗಿ ನೆಲೆಯೂರಲಿಲ್ಲ. ಕಬ್ಬು ಸೂಕ್ತವೆನಿಸಿದರೂ ನೀರಿನ ಕೊರತೆ, ಕಾರ್ಮಿಕರ ಕೊರತೆ, ದರದ ಏರಿಳಿತಗಳಿಂದಾಗಿ ಈ ಬೆಳೆ ಬದುಕಿನಲ್ಲಿ ಸ್ಥಿರತೆಯನ್ನು ತರಲಿಲ್ಲ. ದಿನದಿನದ ಬದುಕೂ ಕಷ್ಟವೆನಿಸಿದಾಗ ಕೃಷಿಯನ್ನು ಬದುಕು ನೀಡುವ ವೃತ್ತಿಯನ್ನಾಗಿ ಮಾಡಲು ನಿರ್ಧರಿಸಿದ್ದರು. ಸಮಾನ ಮನಸ್ಕ ರೈತರ ಒಂದು ಗುಂಪು. ಇವರಲ್ಲಿ ಹೆಚ್ಚಿನವರಿಗೆ ಐದು ಎಕರೆಗಿಂತ ಕಡಿಮೆ ಭೂಮಿ. ದನ-ಕರುಗಳಿಗೆ ಹುಲ್ಲು ನೀಡದ ಭತ್ತದ ತಳಿಗಳು ನಮಗೂ ಪ್ರಯೋಜನವಿಲ್ಲ ಎಂದು ಊರಿನ ರೈತರಿಗೆ ಮನವರಿಕೆ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ.
ಶಂಕರ ಲಂಗಟಿ ಅವರ ತಂದೆ ಹನುಮಂತ ಲಂಗಟಿ ಅವರು ಕೃಷಿಯಲ್ಲಿಯ ಈ ಹಾನಿ ತಡೆಯದೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಗ್ರಾಮಸ್ಥರಲ್ಲಿ ನೋವುಂಟು ಮಾಡಿತ್ತು. ಸುಸ್ಥಿರ ಕೃಷಿಗಾಗಿ ಸಂಕಲ್ಪ ತೊಟ್ಟ ಈ ರೈತರ ಶ್ರಮ ಹುಸಿ ಹೋಗಲಿಲ್ಲ.ಈ ಮಧ್ಯೆ, ಶಂಕರ ಲಂಗಟಿ, ಭೀಮಣ್ಣ ಕಿಲಾರಿ, ಶಿವರಾಜ ಹುನಗುಂದ ಸೇರಿದಂತೆ ಹಲವಾರು ರೈತರು ಅಲೆದಾಡಿ ಹಲವು ದೇಶಿತಳಿಗಳನ್ನು ಹುಡುಕಿ ತಮ್ಮ ಜಮೀನಿನಲ್ಲಿ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಇಂದು ಗುಂಡೇನಟ್ಟಿ ಗ್ರಾಮದಲ್ಲಿ ಹಲವು ದೇಸಿ ತಳಿಗಳು ಲಭ್ಯವಿವೆ. ರೈತರು ಸೇರಿ ಸಿದ್ದಾರೂಢ ಬೀಜ ಬ್ಯಾಂಕ್ ಸ್ಥಾಪಿಸಿದ್ದಾರೆ. ಇಂದು ಸುಸ್ಥಿರ ಕೃಷಿಯನ್ನು ಕೈಗೊಂಡು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಸ್ವತಃ ಶಂಕರ ಲಂಗಟಿ ಅವರು ಮಾರಾಟ ಮಾಡುವ ಮೂಲಕ ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಬಹುದು ಎಂದು ನಿರೂಪಿಸಿದ್ದಾರೆ.ಇವೆಲ್ಲ ಅಂಶಗಳು ಈ ‘ಕೃಷಿಯಲ್ಲಿ ಬದುಕು ಕಟ್ಟಿಕೊಂಡ ಶಂಕರ ಲಂಗಟಿ ಮತ್ತು ಗುಂಡೇನಟ್ಟಿ ಗ್ರಾಮ’ಪುಸ್ತಕದಲ್ಲಿ ದಾಖಲಾಗಿದೆ.
©2024 Book Brahma Private Limited.