ಕಳೆದ ಎರಡು ದಶಕಗಳಿಂದ ದೇಶಿ ಬಿತ್ತನೆ ಬೀಜಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ತುಮಕೂರಿನ ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಕೊರಲೆ ಎಂಬ ಸಿರಿಧಾನ್ಯದ ಬೆಳೆಯ ಮಹತ್ವವನ್ನು ಪರಿಚಯಿಸುವ ಈ ಕೃತಿ ಬರದ ನಾಡಿಗಾಗಿ ಬರೆದ ಸಂವಿಧಾನ ಕೃತಿಯಂತಿದೆ. ಕೊರಲೆ ಎಂಬ ಕಿರುಧಾನ್ಯದ ಬೆಳೆಯನ್ನು ಬೆಳೆಯುವ ವಿಧಾನದಿಂದ ಹಿಡಿದು, ಇದನ್ನು ಸಂಸ್ಕರಿಸುವ ವಿಧಾನ, ಈ ಧಾನ್ಯದಿಂದ ತಯಾರಿಸಬಹುದಾದ ಆಹಾರ ಪದಾರ್ಥಗಳು ಮತ್ತು ಅವುಗಳಲ್ಲಿರುವ ವಿಟಮಿನ್ ಮತ್ತು ಪ್ರೊಟೀನ್ ವಿವರಗಳನ್ನು ಸವಿವರವಾಗಿ ವಿವರಿಸಲಾಗಿದೆ. ಕೊರಲೆ ಕಿರು ಧಾನ್ಯದ ಬೆಳೆಯ ಮತ್ತೊಂದು ವಿಶೇಷವೆಂದರೆ, ಇದನ್ನು ಕೇವಲ ಮಳೆಯಾಶ್ರಿತ ಭೂಮಿ ಮಾತ್ರವಲ್ಲದೆ, ಕರ್ನಾಟಕದ ಎಲ್ಲ ಪ್ರದೇಶಗಳಲ್ಲೂ ಬೆಳೆಯಬಹುದಾಗಿದೆ. ಅಡಿಕೆ ಮತ್ತು ತೆಂಗು ಬೆಳೆಗಾರರ ಅತಿ ದೊಡ್ಡ ಸಮಸ್ಯೆಯೆಂದರೆ, ಅಳಿಲುಗಳ ಕಾಟ. ಆದರೆ, ತೋಟಗಳಲ್ಲಿ ಮರಗಳ ನಡುವೆ ಕೊರಲೆಯನ್ನು ಬೆಳೆಯುವುದರಿಂದ ಅಳಿಲುಗಳ ಆಹಾರ ಸಮಸ್ಯೆ ನೀಗುವುದರ ಜೊತೆಗೆ ಅಡಿಕೆ, ತೆಂಗು ಫಸಲುಗಳನ್ನು ಉಳಿಸಿಕೊಳ್ಳಬಹುದು ಎಂಬುದರ ಕುರಿತು ರೈತರ ಅನುಭವವನ್ನು ಸಹ ಲೇಖಕರು ದಾಖಲಿಸಿದ್ದಾರೆ.
©2024 Book Brahma Private Limited.