ಕರ್ನಾಟಕದ ಗಡಿಗೆ ತಾಗಿಕೊಂಡಿರುವ ಕಾಸರಗೋಡು ಜಿಲ್ಲೆ ವಾಣಿನಗರದ ಶ್ರೀ ಪಡ್ರೆ ಅವರು, ಕೃಷಿಕರು. ಹಿರಿಯ ಅಭಿವೃದ್ಧಿ ಪತ್ರಕರ್ತರು. ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಪ್ರಕಟಿಸುತ್ತಿರುವ ‘ಅಡಿಕೆ ಪತ್ರಿಕೆ’ ಕೃಷಿ ಮಾಸಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು.
ದೆಹಲಿಯ ‘ಸಿವಿಲ್ ಸೊಸೈಟಿ’ ಇಂಗ್ಲಿಷ್ ನಿಯತಕಾಲಿಕದ ಪ್ರಮುಖ ಬರಹಗಾರರು. ಕೃಷಿ-ಗ್ರಾಮೀಣ ರಂಗದ ನಾನಾ ಅಗೋಚರ ವಿದ್ಯಮಾನಗಳನ್ನು, ನವನವೀನ ಸಂಗತಿಗಳನ್ನು ಬಹುಬೇಗನೆ ಸಲೀಸಾಗಿ, ಸೂಕ್ಷ್ಮವಾಗಿ ಗ್ರಹಿಸುವ, ಆಳಕ್ಕಿಳಿದು ಅಧ್ಯಯನ ಮಾಡುವ ಮತ್ತು ಲೇಖನ-ನುಡಿಚಿತ್ರಗಳ ಮೂಲಕ ಅಚ್ಚುಕಟ್ಟಾಗಿ ಸಾದರಪಡಿಸುವ ಮನಸ್ಸು. ರೈತಹಿತವಷ್ಟೇ ಬರವಣಿಗೆಯ ಆಶಯ. ಕಳೆದ ಮೂರು ದಶಕಗಳಿಗೂ ಹೆಚ್ಚು ಸಮಯದಿಂದ ಕನ್ನಡ, ಇಂಗ್ಲಿಷ್ ಮತ್ತು ಮಲಯಾಳಂ ಮೂರೂ ಭಾಷೆಗಳಲ್ಲಿ ಲೇಖನಗಳು ಪ್ರಕಟ. ಒಂದೊಮ್ಮೆ ವ್ಯಂಗ್ಯಚಿತ್ರಕಾರರಾಗಿದ್ದ ಅವರು, ನಂತರ ಕ್ಯಾಮರಾ ಕೈಗೆತ್ತಿಕೊಂಡು ಛಾಯಾಗ್ರಹಣದಲ್ಲಿ ಪಳಗಿದವರು. ಗೇರುತೋಟಗಳಿಗೆ ಎಂಡೋಸಲ್ಫಾನ್ ಸಿಂಪಡಣೆ ಅಮಾಯಕ ಗ್ರಾಮೀಣ ಜನತೆಯ ಜೀವ ಹಿಂಡುವುದನ್ನು ಗಮನಿಸಿ, ಅದರ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಪಡ್ರೆಯವರದು ಮಹತ್ವದ ಪಾತ್ರ.
ನೀರುಳಿಸುವ, ಇಳೆಗೆ ನೀರಿಂಗಿಸುವ ಮಹತ್ವವನ್ನು ಸಾಕಷ್ಟು ಮುಂಚಿತವಾಗಿಯೇ ಮನಗಂಡ ಅವರು, ಜಲಸಾಕ್ಷರತೆ ಹೆಚ್ಚಿಸಲು ಲೇಖನಿ ಕೈಗೆತ್ತಿಕೊಂಡದ್ದಷ್ಟೇ ಅಲ್ಲ; ಪವರ್ ಪಾಯಿಂಟ್ ನೊಂದಿಗೆ ನಾಡಿನ ಉದ್ದಗಲ ಸಂಚರಿಸಿ ಅರಿವಿನ ಬೀಜ ಬಿತ್ತಿದವರು.
ಜನವಾಹಿನಿಯ ‘ಸುಜಲಾಂ ಸುಫಲಾಂ’, ವಿಜಯ ಕರ್ನಾಟಕದ ‘ಹನಿಗೂಡಿಸೋಣ’ ಮತ್ತು ವಿಜಯವಾಣಿಯ ‘ನೀರಿದ್ದರೆ ನಾಳೆ’ ಅಂಕಣಗಳಲ್ಲಿ ಅನೇಕಾನೇಕ ಜಲಪಾಠಗಳನ್ನು, ಯಶೋಗಾಥೆಗಳನ್ನು ಸಾದರಪಡಿಸಿದವರು. ನಾನಾ ಹಣ್ಣು, ಬೆಳೆಗಳ ಮೌಲ್ಯವರ್ಧನೆಗೆ ವಿವಿಧೆಡೆ ನಡೆಯುತ್ತಿರುವ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲಲು ವಿಶೇಷ ಒಲವು. ಹಲಸಿನ ಮಾನವರ್ಧನೆಗೆ ಅವಿರತ ಪ್ರಯತ್ನ. ಈ ನಿಟ್ಟಿನಲ್ಲಿ ಕಳೆದೊಂದು ದಶಕದಿಂದ ವ್ಯಾಪಕ ಪ್ರವಾಸ; ಬರವಣಿಗೆ; ವಿವಿಧ ವೇದಿಕೆಗಳಲ್ಲಿ ವಿಷಯ ಪ್ರಸ್ತುತಿ. ‘ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ’ ಎಂಬ ಹಿರಿಮೆಗೆ ಭಾಜನ. ಅವರು ನಡೆಸುತ್ತಿರುವ ‘ಅರಣ್ಮುಲ ಜಾಕ್ಫ್ರುಟ್ಸ್’ ವಾಟ್ಸಪ್ ಗುಂಪು ಹಲಸು ಪ್ರೇಮಿಗಳ ನಡುವೆ ವಿಶಿಷ್ಟ ಮಾಹಿತಿ ಜಾಲವನ್ನೇ ನಿರ್ಮಿಸಿದೆ. ಈ ಕ್ಷೇತ್ರದ ಹೊಸಬರಿಗೆ ಸ್ಫೂರ್ತಿ, ಮಾರ್ಗದರ್ಶನ ನೀಡುತ್ತಿದೆ. ಸದಾ ಹೊಸತಿನತ್ತ ತುಡಿಯುತ್ತಿರುವ ಅಡಿಕೆ ಪತ್ರಿಕೆ ಪಡ್ರೆಯವರ ಮುಂದಾಳತ್ವದಲ್ಲಿ ಹೊಸ ಎತ್ತರಕ್ಕೇರುತ್ತಲೇ ಇದೆ. ಪ್ರಕಟಣೆಗಾಗಿ ಬಂದ ಲೇಖನಗಳಲ್ಲಿ ಆಯ್ಕೆಮಾಡಿ ಪ್ರಕಟಿಸುವ ಜಾಯಮಾನ ಅದರದ್ದಲ್ಲ. ಬಹುತೇಕ ಲೇಖನಗಳು ಅಡಿಕೆ ಪತ್ರಿಕೆಗಾಗಿಯೇ ಬರೆಯಲ್ಪಟ್ಟವು. ಆದ್ದರಿಂದಲೇ, ಪ್ರತಿ ಸಂಚಿಕೆಯೂ ಪರಿಪಕ್ವ ಎಕ್ಸ್ಕ್ಲೂಸಿವ್ ಲೇಖನಗಳ ಆಗರ. ಪಡ್ರೆಯವರ ಮಾರ್ಗದರ್ಶನದಲ್ಲಿ ಇಂತಹ ಲೇಖನಗಳನ್ನು ಬರೆಯುತ್ತಲೇ ಒಳ್ಳೆಯ ಕೃಷಿ ಲೇಖಕರಾಗಿ ಪಳಗಿದವರು ಅನೇಕರು. ಆರಂಭದಲ್ಲಿ ‘ಕೃಷಿಕರ ಕೈಗೆ ಲೇಖನಿ’ ಶಿಬಿರಗಳನ್ನು ನಡೆಸುತ್ತಿದ್ದ ಪತ್ರಿಕೆ ‘ವಾಟ್ಸಪ್ ಕೃಷಿ ಪತ್ರಿಕೋದ್ಯಮ’ ಕಾರ್ಯಾಗಾರವನ್ನು ಆಯೋಜಿಸಿರುವುದು ಮಾಧ್ಯಮ ಕ್ಷೇತ್ರದಲ್ಲೇ ವಿನೂತನ ಹೆಜ್ಜೆ. ಪಡ್ರೆಯವರು ಈವರೆಗೆ ಬರೆದಿರುವ 19 ಕನ್ನಡ-ಇಂಗ್ಲಿಷ್ ಕೃತಿಗಳಲ್ಲಿ 15 ಪುಸ್ತಕಗಳು ನೆಲಜಲ ಸಂರಕ್ಷಣೆಗೆ ಸಂಬಂಧಿಸಿದವು.