‘ಕೌಶಲ್ಯ ಸಿರಿ’ ಶಿವಶಂಕರ ಟೋಕರೆ ಅವರ ಅಭಿನಂದನ ಗ್ರಂಥವಾಗಿದೆ. ಈಶ್ವರಯ್ಯ ಕೊಡಂಬಲ್ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಇದಕ್ಕೆ ಲೇಖಕ ವಿಕ್ರಮ ವಿಸಾಜಿ ಅವರ ಬೆನ್ನುಡಿ ಬರಹವಿದೆ; ಕೃತಿಯ ಕುರಿತು ತಿಳಿಸುತ್ತಾ 'ಶ್ರೀಯುತ ಶಿವಶಂಕರ ಟೋಕರೆ ಅವರು ಬೀದರ ಜಿಲ್ಲೆಯ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರು. ಇದಕ್ಕೆ ಕಾರಣ ಅವರ ಕಾಯಕ ಪ್ರಜ್ಞೆ, ತಾವು ಕೆಲಸ ಮಾಡುತ್ತಿರುವ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶ್ರದ್ಧೆಯಿಂದ ದುಡಿದು ಆ ಕ್ಷೇತ್ರದ ಮೌಲ್ಯವನ್ನು ಹೆಚ್ಚಿಸಿದರು. ತನು ಶುದ್ದಿ, ಮನ ಶುದ್ಧಿ ಮಾಡುವ ಕಾಯಕದಲ್ಲಿ ಶುದ್ದಿ ಇದು ಅವರ ಮಂತ್ರ ಯಾಕೆಂದರೆ ಅವರು ಬಸವಾಭಿಮಾನಿ ಹಾಗು ಕನ್ನಡ ಅಭಿಮಾನಿ, ಶರಣರ ತತ್ವಗಳನ್ನು ತಮ್ಮ ಜೀವನದಲ್ಲಿ ನಿಷ್ಠೆಯಿಂದ ಅಳವಡಿಸಿಕೊಂಡವರು. ಸಕಲ ಜೀವಿಗಳಿಗೆ ಲೇಸನ್ನೇ ಬಯಸಿದವರು. ಸಾಹಿತ್ಯದಲ್ಲಿ ಅಭಿರುಚಿ ಉಳ್ಳವರು. ಒಂದೆರಡು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲೂ ಕ್ರಿಯಾಶೀಲರಾಗಿದ್ದಾರೆ. ಜಿಲ್ಲೆಯ ಕನ್ನಡ ಕಾರ್ಯಕ್ರಮಗಳಲ್ಲಿ ಅವರದು ಯಾವಾಗಲೂ ಮುಂಚೂಣಿಯ ಸೇವೆ. ಅವರನ್ನು ಹತ್ತಿರದಿಂದ ಬಲ್ಲವರೆಲ್ಲರಿಗೂ ಗೊತ್ತಿದೆ; ಅವರು ಕ್ರಿಯಾಶೀಲತೆ, ಪ್ರಾಮಾಣಿಕತೆ ಮತ್ತು ಸಜ್ಜನಿಕೆಯ ಸಂಗಮವೆಂದು. ಎಂ.ಎಂ. ಕಲಬುರ್ಗಿ ಅವರು ಹಿಂದೊಮ್ಮೆ ಹೇಳಿದ್ದರು 'ಕೆಲಸ ಮಾಡುವವರ ಮನಸ್ಸು ಸ್ವಚ್ಚವಿರುತ್ತದೆ' ಅಂತ. ಶ್ರೀಯುತ ಶಿವಶಂಕರ ಟೋಕರೆ ಅವರನ್ನು ಕಂಡಾಗಲೆಲ್ಲ ನನಗೆ ಈ ಮಾತು ನೆನಪಾಗುತ್ತದೆ. ಇಂಥ ಸುಸಂಸ್ಕೃತ ವ್ಯಕ್ತಿಗಳಿಂದಲೇ ಒಂದು ಜಿಲ್ಲೆಯ, ನಾಡಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇಗ ದೊರೆಯುತ್ತದೆ. ಅವರ ಸಾರ್ಥಕ ಜೀವನ ನಮ್ಮ ಜಿಲ್ಲೆಯ ಹೆಮ್ಮೆ ಎಂದಿದ್ದಾರೆ.
©2024 Book Brahma Private Limited.