ಕವಿ ನಾಟಕಕಾರ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಸಂದರ್ಶನ, ಲೇಖನ, ಸಂಪಾದಕೀಯಗಳನ್ನು ಈ ಪುಸ್ತಕ ಒಳಗೊಂಡಿದೆ. ಕಥೆಗಾರ ಜಯಪ್ರಕಾಶ್ ಮಾವಿನಕುಳಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
ಬೆನ್ನುಡಿಯಲ್ಲಿ ಮತ್ತೊಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿ ಅವರು ’ನನ್ನ ಸಮಕಾಲೀನ ಲೇಖಕರಲ್ಲಿ ವಿಶಿಷ್ಟರಾದ ಚಂದ್ರಶೇಖರ ಕಂಬಾರರ ಕಾವ್ಯದ ಮ್ಯಾಜಿಕ್ ಅನ್ನು ನಾನು ಯಾವತ್ತೂ ವಿಶ್ಲೇಷಿಸದಂತೆ ಅನುಭವಿಸಿದ್ದೇನೆ. ವಿಶ್ಲೇಷಣೆಗೆ ಸಿಗುವಂತೆ ಯೋಚಿಸಿ ಬರೆಯುವ ಕವಿ ಕಂಬಾರರಲ್ಲ. ಇಂಗ್ಲಿಷ್‌ನ ಬಹುದೊಡ್ಡ ಕಾದಂಬರಿಕಾರ ಹೆನ್ರಿ ಜೇಮ್ಸ್ ಬಗ್ಗೆ ಎಲಿಯೆಟ್ ಒಂದು ಮಾತು ಹೇಳುತ್ತಾನೆ: 'ನಮ್ಮ ಕಾಲದಲ್ಲಿ ಈತನೊಬ್ಬನಿಗೆ ಮಾತ್ರ ಅಬ್‌ಸ್ಟ್ರಾಕ್ಸ್ ಆಗಿ ಯಾವ ಅಭಿಪ್ರಾಯಗಳೂ ಹೊಳೆಯುವುದಿಲ್ಲ. ಅವನು ಎಲ್ಲವನ್ನೂ ನಿಜದ ವಸ್ತುಗಳನ್ನಾಗಿಯೇ ಕಾಣುತ್ತಾನೆ'. ಕಂಬಾರರನ್ನು ಬೇಂದ್ರೆಗೆ ಹೋಲಿಸುವುದುಂಟು. ಅದು ಸರಿಯಲ್ಲ. ಕಂಬಾರರು ಮೈಮರೆತು ಆಧ್ಯಾತ್ಮಿಕವಾದ ತುಡಿತದಲ್ಲಿ ಬರೆಯುವವರಲ್ಲ. ಅವರಿಗೆ ಆತ್ಮದಷ್ಟೇ ದೇಹವೂ ನಿಜ. ಆದರೆ ಜಡವೆಂದು ನಾವು ತಿಳಿಯುವ ಜಗತ್ತು ಇವರ ಕಾವ್ಯದೊಳಗೆ ಕುಣಿದಾಡಿಕೊಂಡು ಪ್ರವೇಶಿಸುತ್ತದೆ. ಬೇಂದ್ರೆಯಲ್ಲಿ - ಹಿನ್ನೆಲೆಯಲ್ಲಿ ಹೊಳೆಯುತ್ತದೆ. ಕಂಬಾರರನ್ನು ಎಲ್ಲಿ ಎತ್ತಿ ಓದಿದರೂ ವಕ್ರನೋಟದಿಂದ ಕಂಡ ಸತ್ಯಗಳೇ ಎದುರಾಗುತ್ತವೆ. ಈ ಕಂಬಾರ-ಲೋಕದಲ್ಲಿ ಸತ್ಯವನ್ನು ಯಾರೂ ಮರೆಮಾಚುವಂತಿಲ್ಲ. ಇಲ್ಲಿ ಬರುವ ವ್ಯಕ್ತಿಗಳು ಅತಿ ಹಿಗ್ಗಬಲ್ಲವರೂ ಹೌದು; ಅತಿ ಕುಗ್ಗಬಲ್ಲವರೂ ಹೌದು. ಜೊತೆಗೆ ಇವರು ಬಡಪಾಯಿಗಳೂ ಹೌದು, ಈ ಬಗ್ಗುವ | ಕುಗ್ಗುವ ನಿರಹಂಕಾರ ಗುಣದಿಂದಾಗಿ ಇವರು ಬಚಾವ್ ಆಗುತ್ತಾರೆ. ಬಪೂನ್‌ಗಿರಿಯೂ ಬಚಾವ್ ಆಗುವ ಒಂದು ಕ್ರಮ. ರಾಷ್ಟ್ರಗಳು ಅಳಿದರೂ ಕಂಬಾರರ ಶಿವಾಪುರ ಅಳಿಯುವುದಿಲ್ಲ ಎಂದು ವಿವರಿಸಿದ್ದಾರೆ.
©2024 Book Brahma Private Limited.